ಕಾರವಾರ:ನಾಲಾ ಸ್ವಚ್ಚಗೊಳಿಸುವಲ್ಲಿ ನಿರ್ಲಕ್ಷ್ಯ ಮತ್ತು ಅಸಮರ್ಪಕ ಕಾಮಗಾರಿಯಿಂದಾಗಿ ಗೋಕರ್ಣದ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ನೀರು ನುಗ್ಗಿ, ಕೆಲ ಕಾಲ ಪೂಜಾ ವಿಧಿ ವಿಧಾನಕ್ಕೆ ಅಡ್ಡಿಯಾಗಿರುವ ಘಟನೆ ನಡೆದಿದೆ. ಉತ್ತರಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಶ್ರಿ ಕ್ಷೇತ್ರ ಗೋಕರ್ಣದಲ್ಲಿಯೂ ಮಳೆಯಾರ್ಭಟ ಜೋರಾಗಿದೆ. ಮಳೆಯಿಂದಾಗಿ ಇಲ್ಲಿನ ಮಹಾಬಲೇಶ್ವರ ದೇವಾಲಯದ ಗರ್ಭ ಗುಡಿಗೆ ನೀರು ತುಂಬಿ ನಿತ್ಯ ಪೂಜಾ ವಿಧಿ ವಿಧಾನಕ್ಕೆ ಕೆಲಕಾಲ ವಿಳಂಬವಾದ ಘಟನೆ ಕೂಡ ಸಂಭವಿಸಿದೆ.
ತಕ್ಷಣವೇ ದೇವಾಲಯದ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ, ಅವರ ಉಪಸ್ಥಿತಿಯಲ್ಲಿ ಸಿಬ್ಬಂದಿಗಳು ನೀರು ಹೊರಗಡೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದ್ದಾರೆ. ಪ್ರತಿವರ್ಷ ಮಳೆಗಾಲ ಪೂರ್ವದಲ್ಲಿ ದೇವಾಲಯದ ತೀರ್ಥ, ಅಭಿಷೇಕದ ನೀರು ಹೋಗುವ ಸೋಮಸೂತ್ರ ನಾಲಾ ಸ್ವಚ್ಛಗೊಳಿಸಲಾಗುತ್ತಿತ್ತು. ಆದರೆ ಈ ವರ್ಷ ಈ ಕೆಲಸ ಮಾಡಿಲ್ಲ. ಅಲ್ಲದೆ ಗ್ರಾಮ ಪಂಚಾಯತ್ ಈ ನೀರು ಸೇರುವ ಸಂಗಮ ನಾಲಾದಲ್ಲಿ ಮರಳಿನ ಚೀಲವನ್ನು ಅಡ್ಡಲಾಗಿ ಹಾಕಲಾಗಿದ್ದು ಇದರಿಂದ ಹರಿದು ಹೋಗಬೇಕಾಗಿರುವ ನೀರು ವಾಪಸ್ ಬರುತ್ತಿದೆ ಎನ್ನಲಾಗಿದೆ.