ಕಾರವಾರ: ಉತ್ತರ ಕನ್ನಡ ಜಿಲ್ಲಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಸಿದ್ದಾಪುರದ ಶಿವಳಮನೆಯ ಅಬ್ಬಿಗದ್ದೆಯಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಗಾಳಿ ಮಳೆಗೆ ಮರ ಬಿದ್ದು, ರೈತನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಶ್ರೀಧರ ನಾರಾಯಣ ಹೆಗಡೆ ಮೃತ ರೈತ.
ಮತ್ತೊಂದು ಪ್ರಕರಣದಲ್ಲಿ ಓಮ್ನಿ ಮೇಲೆ ವಿದ್ಯುತ್ ಕಂಬ ಹಾಗೂ ಮರ ಬಿದ್ದು ಮಗು ಗಾಯಗೊಂಡಿದೆ. ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯದ ಹತ್ತಿರ ಮರ ವಿದ್ಯುತ್ ಕಂಬದ ಮೇಲೆ ಬಿದ್ದು ಬಳಿಕ ಓಮ್ನಿ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಓಮ್ನಿಯಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದು, ಮಗು ಮಾತ್ರ ಗಾಯಗೊಂಡಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಓಮ್ನಿ ಸಂಪೂರ್ಣ ಜಖಂಗೊಂಡಿದೆ.
ಉತ್ತರ ಕನ್ನಡದಲ್ಲಿ ಮಳೆ ಆರ್ಭಟ... ಇನ್ನು ಕರಾವಳಿಯಲ್ಲಿಯೂ ಉತ್ತಮ ಮಳೆಯಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ಭಾರಿ ಮಳೆಯಾಗಿದೆ. ಕೆಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನರು ಪರದಾಡುತ್ತಿದ್ದಾರೆ.
ಗುಡ್ಡ ಕುಸಿತ: ಗೋಕರ್ಣದ ಮುಖ್ಯ ಕಡಲ ತೀರದಿಂದ ರಾಮಮಂದಿರಕ್ಕೆ ತೆರಳುವ ರಸ್ತೆಯಲ್ಲಿ ಗುಡ್ಡ ಕುಸಿತವಾಗಿದೆ. ಇದರಿಂದ ಪ್ರವಾಸಿಗರು ಸೇರಿದಂತೆ ಜನಸಾಮಾನ್ಯರು ಪರದಾಡಬೇಕಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಪರಿಣಾಮ ಧರೆ ಕುಸಿತವಾಗಿದ್ದು, ಬೃಹತ್ ಬಂಡೆಗಳು ರಸ್ತೆಗೆ ಉರುಳಿವೆ. ಕಡಲ ತೀರದ ಪಕ್ಕದಲ್ಲಿರುವ ಈ ರಸ್ತೆಯ ಒಂದು ಕಡೆ ಕಡಿದಾದ ಪರ್ವತ ಪ್ರದೇಶವಿದ್ದು, ಮತ್ತಷ್ಟು ಕುಸಿಯುವ ಭೀತಿ ಇದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಧಾರಾಕಾರ ಮಳೆ: ರೈತರ ಮೊಗದಲ್ಲಿ ಮಂದಹಾಸ