ಕಾರವಾರ:ರಾಜ್ಯದಲ್ಲಿ ಮುಂಗಾರು ಪ್ರವೇಶವಾಗಿದೆ. ಜುಲೈ ಅಂತ್ಯದೊಳಗೆ ಬಹುತೇಕ ಕಡೆ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಸದ್ಯಕ್ಕೆ ಮೋಡ ಬಿತ್ತನೆ ಮಾಡುವ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಉತ್ತರಕನ್ನಡದ ಕುಮಟಾದಲ್ಲಿ ನೆರೆಪೀಡಿತ ಪ್ರದೇಶಗಳ ಪರಿಶೀಲನೆ ಹಾಗೂ ಬೆಟ್ಕುಳಿ ಗ್ರಾಮದಲ್ಲಿ ನೆರೆಗೆ ಮೃತಪಟ್ಟ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಮಾತನಾಡಿದ ಅವರು, ಕಾರವಾರ, ಬೆಳಗಾವಿ ಭಾಗದಲ್ಲಿ ಮಳೆಯಾಗಿದೆ. ಆದರೆ ಕೆಲ ಜಿಲ್ಲೆಗಳಲ್ಲಿ ಇನ್ನೂ ಮಳೆಯಾಗಿಲ್ಲ.
ಆದರೆ, ಹವಾಮಾನ ಇಲಾಖೆ ಜುಲೈ ಅಂತ್ಯದೊಳಗೆ ಎಲ್ಲೆಡೆ ಮಳೆಯಾಗುವ ಮುನ್ಸೂಚನೆ ನೀಡಿದೆ. ಜುಲೈ 20ರ ವರೆಗೆ ನೋಡಿ, ಮಳೆಯಾಗದೇ ಇದ್ದಲ್ಲಿ ಕೇಂದ್ರ ಸರ್ಕಾರದ ಮಾನದಂಡವನ್ನು ನೋಡಿ ಮೋಡ ಬಿತ್ತನೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ನೆರೆ ಪಿಡೀತ ಪ್ರದೇಶದ ಜನರ ಅಹವಾಲು ಆಲಿಕೆ:ಇನ್ನು ರಾಜ್ಯದಲ್ಲಿ ಈ ವರೆಗೆ 21 ಜನ ಸಾವನ್ನಪ್ಪಿದ್ದಾರೆ. ಮಂಗಳೂರು 6, ಉಡುಪಿ 4, ಉತ್ತರಕನ್ನಡ 3 ಕೆಲವರು ಇನ್ನು ಸಿಡಿಲಿಗೆ ಸಾವನ್ನಪ್ಪಿದ್ದಾರೆ. ಐದು ಲಕ್ಷ ಪರಿಹಾರವನ್ನು ನೀಡಿದ್ದೇವೆ. ಒಟ್ಟು 47 ಕ್ಕೂ ಹೆಚ್ಚು ಜಾನುವಾರಗಳು ಸಾವನ್ನಪ್ಪಿವೆ. ಮನೆಗಳು ಕೂಡ ಸಾಕಷ್ಟು ಹಾನಿಯಾಗಿವೆ. ನೆರೆಯಲ್ಲಿ ಸಂಪೂರ್ಣ ಕುಸಿದ ಮನೆಗಳಿಗೆ 1.30 ಲಕ್ಷ ಪರಿಹಾರ ನೀಡಿದ್ದೇವೆ. ಜೊತೆಗೆ ಹೊಸ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ನೆರೆ ಪಿಡೀತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಅಹವಾಲು ಆಲಿಸಿದ್ದೇನೆ. ಜೊತೆಗೆ ಅಧಿಕಾರಿ ವರ್ಗಕ್ಕೆ ತಕ್ಷಣ ಪರಿಹಾರ ಕ್ರಮಕೈಗೊಳ್ಳಲು ಚುರುಕು ಮುಟ್ಟಿಸುವ ಕೆಲಸ ಕೂಡ ಮಾಡುತ್ತಿರುವುದಾಗಿ ಎಂದು ಮಾಹಿತಿ ನೀಡಿದರು.