ಕಾರವಾರ: ರಾಜ್ಯಾದ್ಯಂತ ವರುಣನ ಆರ್ಭಟ ಜೋರಾಗಿದೆ. ಉತ್ತರ ಕನ್ನಡ ಮಳೆಯಿಂದ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮಗುಚಿ ಪತ್ನಿ ಮೃತಪಟ್ಟಿದ್ದು, ಪತಿ ಈಜಿ ದಡ ಸೇರಿರುವ ಘಟನೆ ಹೊನ್ನಾವರ ತಾಲೂಕಿನ ಮೊಳ್ಕೋಡ ಗ್ರಾಮದ ಶರಾವತಿ ನದಿಯಲ್ಲಿ ನಡೆದಿದೆ.
ಮೊಳ್ಕೋಡ ಗ್ರಾಮದ ಮಾದೇವಿ ಸುಬ್ರಾಯ ಅಂಬಿಗ (46) ಮೃತ ಮಹಿಳೆಯಾಗಿದ್ದಾಳೆ. ಶರಾವತಿ ನದಿಯಲ್ಲಿ ಮೀನುಗಾರಿಕೆಗೆ ಪತಿ ಸುಬ್ರಾಯ ಅಂಬಿಗನ ಜೊತೆ ತೆರಳಿದ್ದಾಗ ಭಾರಿ ಗಾಳಿ ಸಹಿತ ಮಳೆಗೆ ದೋಣಿ ಮಗುಚಿ ಮಹಿಳೆ ನೀರು ಪಾಲಾಗಿದ್ದಳು. ಈ ವೇಳೆ ಪತ್ನಿಯ ರಕ್ಷಣೆಗೆ ಪತಿ ಯತ್ನಿಸಿದನಾದರೂ ನೀರಿನ ರಭಸದ ಹರಿವಿನಿಂದ ಸಾಧ್ಯವಾಗಿರಲಿಲ್ಲ. ಬಳಿಕ ಸುಬ್ರಾಯ ಈಜಿ ದಡ ಸೇರಿದ್ದ.