ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊಂಚ ಬಿಡುವು ನೀಡಿದ್ದ ಮಳೆ ಮತ್ತೆ ಅಬ್ಬರಿಸಲು ಶುರುವಾಗಿದೆ. ಮಳೆಯ ಜೊತೆಗೆ ಬಿರುಗಾಳಿಯಂತೆ ಗಾಳಿ ಬೀಸುತ್ತಿರುವುದು ಸಾಕಷ್ಟು ಅವಘಡಗಳ ಸೃಷ್ಟಿಗೆ ಕಾರಣವಾಗುತ್ತಿದೆ. ಮತ್ತೊಂದೆಡೆ ಜಲಾಶಯಗಳು ಭರ್ತಿಯ ಹಂತಕ್ಕೆ ತಲುಪಿದ್ದು, ನೀರು ಹೊರ ಬಿಡಲಾಗುತ್ತಿದೆ. ಇದರಿಂದ ಗ್ರಾಮಗಳು ಜಲಾವೃತವಾಗುವ ಆತಂಕವಿದೆ.
ಭಾರಿ ಮಳೆ ಗಾಳಿಯಿಂದಾಗಿ ಸಮುದ್ರದಲ್ಲಿ ಅಲೆಗಳ ಭೋರ್ಗರೆತ ಜೋರಾಗಿದೆ. ಸಾಂಪ್ರದಾಯಿಕ ಮೀನುಗಾರರು ಕಡಲಿಗಿಳಿಯದ ಪರಿಸ್ಥಿತಿ ಎದುರಾಗಿದೆ. ಶಿರಸಿ, ಸಿದ್ದಾಪುರ ಭಾಗದಲ್ಲಿ ವ್ಯಾಪಕವಾಗಿದ್ದು, ಹಳಿಯಾಳ, ಜೋಯಿಡಾ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.
ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು:ಶಿರಸಿ, ಬನವಾಸಿ, ಸಿದ್ದಾಪುರ ಮತ್ತು ಶಿವಮೊಗ್ಗ ಭಾಗದಲ್ಲಿ ಮಳೆ ಮುಂದುವರಿದ ಕಾರಣ ವರದಾ ನದಿ ಉಕ್ಕಿ ಹರಿಯುತ್ತಿದೆ. ಬನವಾಸಿಯ ಬಾಸಿ ಗ್ರಾಮ ಪಂಚಾಯಿತಿಯ ಮೊಗಳ್ಳಿ ಗ್ರಾಮದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇದರಿಂದ ಅಡಕೆ, ಅನಾನಸ್ ತೋಟ, ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಸುಮಾರು 400 ಎಕರೆಗೂ ಹೆಚ್ಚು ಪ್ರದೇಶಕ್ಕೆ ನೀರು ನುಗ್ಗಿ ಹಾನಿಯಾಗಿದೆ.
ಜಲಾಶಯಗಳಿಂದ ನೀರು ಬಿಡುಗಡೆ:ಮಳೆ ಹೆಚ್ಚಾದ ಕಾರಣ ಜಲಾಶಯಗಳಿಗೆ ಹರಿದು ಬರುವ ನೀರಿನ ಪ್ರಮಾಣ ಏರಿಕೆಯಾಗಿದೆ. ಈಗಾಗಲೇ ದಾಂಡೇಲಿ ತಾಲೂಕಿನ ಅಂಬಿಕಾ ನಗರದ ಬೊಮ್ಮನಹಳ್ಳಿ, ಕಾರವಾರ ತಾಲೂಕಿನ ಕದ್ರಾ, ಹೊನ್ನಾವರ ವ್ಯಾಪ್ತಿಯ ಗೇರುಸೊಪ್ಪ ಅಣೆಕಟ್ಟೆಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ.
ಸದ್ಯ ಅಣೆಕಟ್ಟೆಗಳ ಸುರಕ್ಷತಾ ದೃಷ್ಟಿಯಿಂದ ನಿಗದಿತ ಪ್ರಮಾಣದ ನೀರನ್ನು ಸಂಗ್ರಹಿಸಿ, ಅದಕ್ಕಿಂತ ಹೆಚ್ಚಾದ ನೀರನ್ನು ಹೊರಬಿಡಲು ಜಿಲ್ಲಾಡಳಿತ ಜಲಾಶಯಗಳ ನೋಡಲ್ ಅಧಿಕಾರಿಗಳಿಗೆ ಸೂಚಿಸಿದೆ. ಅದರಂತೆ 438.38 ಮೀ. ಗರಿಷ್ಠ ಮಟ್ಟದ ಬೊಮ್ಮನಹಳ್ಳಿ ಜಲಾಶಯ 437.43 ಮೀ.ನಷ್ಟು ಭರ್ತಿಯಾಗಿದ್ದು, ಒಟ್ಟಾರೆ 4,353 ಕ್ಯೂಸೆಕ್ ನೀರನ್ನ ಹೊರಬಿಡಲಾಗಿದೆ.