ಕಾರವಾರ: ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಪ್ರಸಿದ್ಧ ದೂದ್ ಸಾಗರ್ ಜಲಪಾತ ವೀಕ್ಷಣೆಗೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಅದರಲ್ಲಿಯೂ ಈಗ ಮಳೆ ಬರುತ್ತಿರುವುದರಿಂದ ಅದರ ಸೊಬಗು ಮತ್ತಷ್ಟು ಹೆಚ್ಚಾಗಿದೆ. ಆದರೆ ಪ್ರವಾಸಕ್ಕೆಂದು ಬರುವ ಜನರು ಅಲ್ಲಿ ಮೋಜು ಮಸ್ತಿ ಮಾಡಿ ಪ್ರಕೃತಿಯನ್ನು ಹಾಳು ಮಾಡುವುದರಲ್ಲಿ ಹಿಂಜರಿಯುವುದಿಲ್ಲ. ಹೀಗಾಗಿ ಈ ಸಂಭ್ರಮಕ್ಕೆ ಕಡಿವಾಣ ಬೀಳಲಿದೆ. ಇನ್ಮುಂದೆ ಪ್ರವಾಸಿಗರು ದೂದ್ ಸಾಗರ್ನಲ್ಲಿ ಅಡ್ಡಾದಿಡ್ಡಿ ಓಡಾಡುವಂತಿಲ್ಲ. ಈ ಬಗ್ಗೆ ರೈಲ್ವೆ ಇಲಾಖೆ ಎಚ್ಚರಿಕೆ ನೀಡಿದೆ.
ನೈಋತ್ಯ ರೈಲ್ವೆಯು, ದೂದ್ ಸಾಗರ್‌ನ ಸೌಂದರ್ಯವನ್ನು ರೈಲಿನ ಬೋಗಿ ಒಳಗಿನಿಂದ ಮಾತ್ರವೇ ವೀಕ್ಷಿಸುವಂತೆ ಪ್ರಯಾಣಿಕರಿಗೆ ಸೂಚಿಸಿದೆ. ಗೋವಾ ಕರ್ನಾಟಕ ಗಡಿ ಭಾಗದಲ್ಲಿರುವ ದೂದ್ ಸಾಗರ್ ವೀಕ್ಷಿಸಲು ಪ್ರವಾಸಿಗರು ಬರುವುದು ಸಾಮಾನ್ಯ. ಇಲ್ಲಿ ರೈಲು ನಿಲುಗಡೆ ಇಲ್ಲದ ಕಾರಣ ಸಾಕಷ್ಟು ಪ್ರವಾಸಿಗರು ಹಳಿಗಳ ಮೇಲೆಯೇ ನಡೆದು ಬರುತ್ತಾರೆ. ಈ ಭಾಗದಲ್ಲಿ ಸಂಚರಿಸುವ ಗೂಡ್ಸ್ ರೈಲುಗಳನ್ನು ಹತ್ತಿ, ದೂಧ್‌ಸಾಗರ್ ಬಳಿ ಇಳಿಯವವರಿದ್ದಾರೆ. ಈ ರೀತಿಯ ದುಸ್ಸಾಹಸವನ್ನು ಮಾಡದಂತೆ ರೈಲ್ವೆ ಇಲಾಖೆ ಎಚ್ಚರಿಸಿದೆ.
ಇದನ್ನೂ ಓದಿ:ದೂಧ್ ಸಾಗರ್ ನೀರಿನ ಮಟ್ಟ ಹೆಚ್ಚಳ: ಕುಸಿದ ಕೇಬಲ್ ಸೇತುವೆ - 40ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆ
ಸ್ವಂತ ಸುರಕ್ಷತೆಗೆ ಅಪಾಯ ಉಂಟಾಗುವ ಸಾಧ್ಯತೆ: ಸೌತ್ ವೆಸ್ಟರ್ನ್ ರೈಲ್ವೆ ಖಾತೆಯಿಂದ ಟ್ವಿಟ್ ಮಾಡಿ, ದೂದ್ಸಾಗರ ಸೌಂದರ್ಯವನ್ನು ರೈಲ್ವೆ ಬೋಗಿಯಿಂದಲೇ ನೋಡಿ ಆನಂದಿಸಿ. ಹಳಿಗಳ ಮೇಲೆ, ಹಾದಿಯಲ್ಲಿ ನಡೆಯುವುದು ನಿಮ್ಮ ಸ್ವಂತ ಸುರಕ್ಷತೆಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ ಇದು ರೈಲ್ವೆ ಕಾಯಿದೆಯ ಸೆಕ್ಷನ್ 147, 159 ರ ಅಡಿಯಲ್ಲಿ ಅಪರಾಧವಾಗಿದೆ. ಇದು ರೈಲುಗಳ ಸುರಕ್ಷತೆಗೂ ಅಪಾಯ ತಂದೊಡ್ಡುವ ಸಾಧ್ಯತೆಗಳಿರುವುದರಿಂದ ರೈಲಿನಿಂದಲೇ ಸೌಂದರ್ಯ ಸವಿಯುವಂತೆ ತಿಳಿಸಿದೆ.