ಕಾರವಾರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷೇತ್ರ ಪ್ರವಾಸ ಮಾಡುತ್ತಿರುವ ಬಗ್ಗೆ ಖುಷಿ ಇದೆ, ಬಹಳ ಒಳ್ಳೆಯದು. ಯಾಕೆಂದರೆ ಅವರು ಹೋದಲ್ಲೆಲ್ಲ ಕಾಂಗ್ರೆಸ್ ಸೋಲುತ್ತಾ ಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಭಟ್ಕಳದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ರಿಟೈರ್ಡ್ ಮೋಡ್ಗೆ ಬಂದಿದ್ದಾರೆ. ಈಗ ನಡೆಸುತ್ತಿರುವ ಯುವ ಕ್ರಾಂತಿ ಸಮಾವೇಶವನ್ನು ಅವರು ಹತ್ತು ವರ್ಷಗಳ ಹಿಂದೆ ಮಾಡಿದ್ದರೆ ಒಳ್ಳೆಯದಿತ್ತು ಎಂದು ವ್ಯಂಗ್ಯವಾಡಿದ್ದಾರೆ.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ನಾವು ಪ್ರಣಾಳಿಕೆ ಮಾಡುತ್ತೇವೆ. ಕಾಂಗ್ರೆಸ್ ಪಕ್ಷದವರೂ ಪ್ರಣಾಳಿಕೆ ಮಾಡ್ತಾರೆ. ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ ಮಾಡಿದರೂ ಸಹ ಜನರ ಮನಸ್ಸಿನಿಂದ ಕಾಂಗ್ರೆಸ್ ಪಕ್ಷ ದೂರವಿದೆ. ಕರಾವಳಿಯಲ್ಲಿ ಕಳೆದ ಬಾರಿ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆದ್ದಿತ್ತು. ಈ ಬಾರಿ ಅದನ್ನೂ ಉಳಿಸಿಕೊಳ್ಳಲು ಆಗಲ್ಲ, ಕಾಂಗ್ರೆಸ್ ಮುಕ್ತ ಕರಾವಳಿ ಆಗಲಿದೆ ಎಂದು ಹೇಳಿದರು.
ಪಾರ್ಟಿ ಗಟ್ಟಿ ಇದ್ದಲ್ಲಿ ಆಂತರಿಕ ಗಲಾಟೆ ಇರುತ್ತದೆ. ಅದು ಖುಷಿ ಇದೆ. ಅಂಥ ಸಮಸ್ಯೆಗಳನ್ನು ಪಾರ್ಟಿ ಪರಿಹರಿಸುತ್ತದೆ ಎಂದ ಅವರು, ಉರಿಗೌಡ, ನಂಜೇಗೌಡರ ವಿಚಾರ ಇತಿಹಾಸದಲ್ಲಿರುವುದು, ಅದು ಈಗ ಚರ್ಚೆಗೆ ಬಂದಿದೆ. ಚರ್ಚೆಯಾಗಲಿ, ಸತ್ಯಾಸತ್ಯತೆ ಹೊರಗೆ ಬರಲಿ. ಇತಿಹಾಸದಲ್ಲಿ ಹತ್ತಾರು ವ್ಯತ್ಯಾಸಗಳಿವೆ. ಹತ್ತಾರು ಇತಿಹಾಸಗಳನ್ನು ತಿರುಚಲಾಗಿದೆ. ಇತಿಹಾಸ ಸರಿಯೋ ತಪ್ಪೋ ಎಂದು ಹೇಳೋದಿಕ್ಕೆ ನಾನು ಇತಿಹಾಸ ತಜ್ಞ ಅಲ್ಲ. ಆದರೆ ಚರ್ಚೆಯಾಗಲಿ, ಸತ್ಯಾಸತ್ಯತೆ ಹೊರಬರಲಿ ಎಂದು ಹೇಳಿದ್ದಾರೆ.