ಕಾರವಾರ:ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದ ರವೀಂದ್ರನಾಥ ಟಾಗೋರ್ ಕಡಲತೀರ ನಿಷೇಧಾಜ್ಞೆಯಿಂದಾಗಿ ಜನರಿಲ್ಲದೇ ಬೀಕೋ ಎನ್ನುತ್ತಿದ್ದು, ಹೊಸ ವರ್ಷದ ಸಂಭ್ರಮಾಚರಣೆಗೆ ಕಡಲತೀರದಲ್ಲಿ ಬ್ರೇಕ್ ಬಿದ್ದಿದೆ.
ಹೌದು, ರೂಪಾಂತರ ವೈರಸ್ ಆತಂಕದಿಂದಾಗಿ ಉತ್ತರಕನ್ನಡ ಜಿಲ್ಲೆಯ ಕರಾವಳಿಯ ಬೀಚ್ ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಾಜ್ಞೆ ಹೇರಿದ್ದು, ಎಲ್ಲೆಡೆಯೂ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಅಲ್ಲದೇ ನಿತ್ಯ ಸಂಜೆ ಕಡಲತೀರದಲ್ಲಿ ಸೇರಿತ್ತಿದ್ದ ಜನರಿಗೂ ಇಂದು ನಿಷೇಧಾಜ್ಞೆ ಕಾರಣಕ್ಕೆ ಪೊಲೀಸರು ತಡೆಯೊಡ್ಡಿದ್ದು, ಪರಿಣಾಮ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ ಜನರಿಲ್ಲದೆ ಬಿಕೋ ಎನ್ನುತ್ತಿದೆ.
ಇನ್ನು ಕಾರವಾರ ಮಾತ್ರವಲ್ಲದೇ, ಗೋಕರ್ಣ, ಮುರುಡೇಶ್ವರ, ಹೊನ್ನಾವರದ ಪ್ರಮುಖ ಕಡಲತೀರಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿದಿದ್ದು,ಹೊಸ ವರ್ಷಾಚರಣೆಗೆ ಸಂಪೂರ್ಣ ಬ್ರೇಕ್ ಬಿದ್ದಿದೆ. ಅಲ್ಲದೇ ಕಡಲತೀರಗಳತ್ತ ಆಗಮಿಸುತ್ತಿದ್ದ ಜನರನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದು, ನಿರಾಸೆ ಮೂಡುವಂತಾಗಿದೆ.
ಇದನ್ನೂ ಓದಿ: ಕಾರವಾರ ಕಡಲತೀರದಲ್ಲಿ ಡ್ರೋನ್ ಕಣ್ಗಾವಲು; ಹೊಸ ವರ್ಷಾಚರಣೆಗೆ ಬ್ರೇಕ್
ಇನ್ನು ಜಿಲ್ಲೆಯ ಕರಾವಳಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡುತ್ತಿರುವುದು ತಿಳಿಯುತ್ತಿದ್ದಂತೆ ಜಿಲ್ಲೆಗೆ ಆಗಮಿಸಿದ ಪ್ರವಾಸಿಗರು ಸೇರಿದಂತೆ ಜಿಲ್ಲೆಯ ಜನರು ಗೋವಾ ಬೀಚ್ಗಳತ್ತ ತೆರಳುತ್ತಿದ್ದಾರೆ. ಪರಿಣಾಮ ಗೋವಾದ ಎಲ್ಲ ಬೀಚ್ಗಳು ತುಂಬಿ ತುಳುಕುತ್ತಿದ್ದು ಹೊಸ ವರ್ಷದ ಸಂಭ್ರಮಾಚರಣೆಗೆ ಕಾತರರಾಗಿದ್ದಾರೆ.