ಕಾರವಾರ (ಉತ್ತರ ಕನ್ನಡ): ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸುನಿಲ್ ಹೆಗಡೆ ವಿರುದ್ಧ ಸುಮಾರು 3,500 ಮತಗಳ ಅಂತರದಿಂದ ಗೆಲುವು ಪಡೆಯುವ ಮೂಲಕ 9ನೇ ಬಾರಿ ಗೆದ್ದು ಬೀಗಿದ್ದಾರೆ. ಇವರು ಒಟ್ಟು 57,240 ಮತಗಳನ್ನು ಪಡೆದಿದ್ದು, ಸುನಿಲ್ ಹೆಗಡೆ 53,617 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಜಿ.ಎಸ್ ಲಕ್ಷಣ್ ಅವರಿಗೆ 28,682 ಮತ ಸಿಕ್ಕಿದೆ.
ರಾಜ್ಯದ ಅತ್ಯಂತ ಹಿರಿಯ ಶಾಸಕ ಹಾಗೂ ಅತಿ ಹೆಚ್ಚು ಬಾರಿ ಗೆದ್ದು ವಿಧಾನಸಭೆಗೆ ಆಯ್ಕೆಯಾಗಿರುವವರ ಪೈಕಿ ಒಬ್ಬರಾಗಿರುವ ದೇಶಪಾಂಡೆ, ಹಳಿಯಾಳ ವಿಧಾನಸಭಾ ಕ್ಷೇತ್ರದಿಂದಲೇ 9ನೇ ಬಾರಿ ಸ್ಪರ್ಧಿಸಿದ್ದು ವಿಶೇಷ. ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ನ ಪ್ರಮುಖ ನೇತಾರ, ಹಿರಿಯ ಮುಖಂಡ, ಮುತ್ಸದ್ಧಿ ರಾಜಕಾರಣಿ. ಮಾತ್ರವಲ್ಲದೆ, ರಾಜ್ಯದಲ್ಲಿಯೇ ಅತಿ ಹೆಚ್ಚು ಬಾರಿ ವಿಧಾನಸಭೆಗೆ ಆಯ್ಕೆಯಾದ ಶಾಸಕರಲ್ಲಿ ದೇಶಪಾಂಡೆ ಕೂಡ ಒಬ್ಬರು. 'ಶಾಸಕ ಸದನದ ದೊಡ್ಡಣ್ಣ' ಎಂದೇ ಗುರುತಿಸಿಕೊಳ್ಳುವ ದೇಶಪಾಂಡೆಗೆ ಹಳಿಯಾಳ ವಿಧಾನಸಭಾ ಕ್ಷೇತ್ರ ಭದ್ರಕೋಟೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಿದ್ದರೂ ಹಳಿಯಾಳವನ್ನು ವಶಪಡಿಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ.
ದೇಶಪಾಂಡೆ ಅವರ ಪೂರ್ಣ ಹೆಸರು ರಘುನಾಥ ವಿಶ್ವನಾಥ ದೇಶಪಾಂಡೆ. 1947ರ ಮಾರ್ಚ್ 16ರಂದು ಜಿಲ್ಲೆಯ ಹಳಿಯಾಳದಲ್ಲಿ ಜನಿಸಿದರು. ತಂದೆ ವಿಶ್ವನಾಥ ರಾವ್, ತಾಯಿ ವಿಮಲಾ ಬಾಯಿ. ದೇಶಪಾಂಡೆ ಕಾನೂನು ಪದವೀಧರರಾಗಿದ್ದು, ರಾಜ್ಯ ಕಂಡ ಮುತ್ಸದ್ಧಿ ರಾಜಕಾರಣಿಗಳಲ್ಲಿ ಒಬ್ಬರು. ದೇಶಪಾಂಡೆ ಮತ್ತು ರಾಧಾ ಆರ್.ದೇಶಪಾಂಡೆ ದಂಪತಿಗೆ ಪ್ರಸಾದ್ ದೇಶಪಾಂಡೆ, ಪ್ರಶಾಂತ್ ದೇಶಪಾಂಡೆ ಎಂಬ ಇಬ್ಬರು ಪುತ್ರರಿದ್ದಾರೆ.