ಕಾರವಾರ : ಹಣವೇ ಇಲ್ಲ ಎಂದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಾಗ ಅಭಿವೃದ್ಧಿ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತವಾಗಿದೆ ಎಂದು ಮಾಜಿ ಸಚಿವ ಹಾಲಿ ಶಾಸಕ ಆರ್. ವಿ. ದೇಶಪಾಂಡೆ ಟೀಕಿಸಿದ್ದಾರೆ.
ಸಿದ್ದಾಪುರದಲ್ಲಿ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಸಾಕಷ್ಟು ಗೊಂದಲವಿದೆ. ಸಂಪುಟ ವಿಸ್ತರಣೆ ಕೂಡ ಈವರೆಗೂ ಆಗಿಲ್ಲ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಪ್ರವಾಹ ಸಂದರ್ಭದಲ್ಲಾದ ಹಾನಿಗೆ ಕೇಂದ್ರ ಸರ್ಕಾರ ನೀಡಬೇಕಿದ್ದ ಪರಿಹಾರ ಹಣವನ್ನು ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಸಂಪುಟ ವಿಸ್ತರಣೆ ಮತ್ತು ವಿಪಕ್ಷ ನಾಯಕರ ಆಯ್ಕೆ ಕುರಿತು ಆರ್. ವಿ. ದೇಶಪಾಂಡೆ ಹೇಳಿಕೆ ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ನಾಯಕರಾಗಿಯೇ ಮುಂದುವರೆಯಬೇಕು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವಧಿ ಇನ್ನೂ ಮುಗಿದಿಲ್ಲ. ಈ ಬಗ್ಗೆ ಹೈಕಮಾಂಡ್ ಎಲ್ಲರ ಅಭಿಪ್ರಾಯ ತೆಗೆದುಕೊಂಡಿದ್ದು ನಾಲ್ಕು ದಿನದಲ್ಲಿ ಅಧ್ಯಕ್ಷ ಸ್ಥಾನದ ಬಗ್ಗೆ ಪ್ರಕಟಿಸಲಿದೆ ಎಂದು ಹೇಳಿದರು.
ಡಿ.ಕೆ ಶಿವಕುಮಾರ್ ಅವರು ಅಧ್ಯಕ್ಷ ಸ್ಥಾನ ಕೇಳುವುದು ಯಾವುದೇ ತಪ್ಪಲ್ಲ. ಅದು ಅವರ ಹಕ್ಕು. ಯಾರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. ನನಗೂ ಪಕ್ಷದ ಜವಬ್ದಾರಿ ತೆಗೆದುಕೊಳ್ಳುವ ಕುರಿತು ಹೈಕಮಾಂಡ್ ಕೇಳಿತ್ತು. ಆದರೆ ನಾನು ಆ ಸ್ಥಾನಕ್ಕೆ ಆಕಾಂಕ್ಷಿಯಲ್ಲ ಎಂದು ದೇಶಪಾಂಡೆ ತಿಳಿಸಿದರು.