ಕಾರವಾರ(ಉತ್ತರಕನ್ನಡ): ನಿನ್ನೆ ದೇಶಾದ್ಯಂತ ಗಣೇಶ ಹಬ್ಬ ವಿಜೃಂಭಣೆಯಿಂದ ನಡೆದಿದೆ. ಮನೆ ಮನೆಯಲ್ಲೂ ಗಣಪನ ವಿಗ್ರಹ ತಂದು ಆರಾಧಿಸುವ ಜೊತೆಗೆ ಸಾರ್ವಜನಿಕವಾಗಿಯೂ ವಿಭಿನ್ನ ಬಗೆಯ ವಿನಾಯಕ ಮೂರ್ತಿಗಳನ್ನು ಜನರು ಪ್ರತಿಷ್ಠಾಪಿಸಿದ್ದಾರೆ. ಇಲ್ಲೊಂದು ಟೈ ಹಾಕಿ, ಸೂಟು ಧರಿಸಿ, ನಗುಮೊಗದಿಂದ ಕುಳಿತಿರುವ ದಿ. ಪುನೀತ್ ರಾಜ್ಕುಮಾರ್ ಮೂರ್ತಿ ಜನರನ್ನು ಹೆಚ್ಚು ಆಕರ್ಷಣೆ ಮಾಡಿದೆ.
ಕನ್ನಡದ ಕೋಟ್ಯಾಧಿಪತಿ ಮಾದರಿಯಲ್ಲಿ ಕುಳಿತಿರುವ ಅಪ್ಪು.. ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಪುನೀತ್ ರಾಜ್ಕುಮಾರ್ ಮೂರ್ತಿಯನ್ನು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸಿಕೊಡುವ ಮಾದರಿಯಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಥೇಟ್ ಅಪ್ಪುವನ್ನೇ ಹೋಲುವ ಮೂರ್ತಿಯಿದು. ಇದರ ಫೋಟೋ, ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದು ಅವರ್ಸಾ ಗ್ರಾಮದ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ನಡೆದ 39ನೇ ಗಣೇಶೋತ್ಸವ ಆಗಿದೆ.
ಮೂರ್ತಿ ತಯಾರಿಸಿದ ಕಲಾವಿದ ದಿನೇಶ ಮೇತ್ರಿ.. ಪುನೀತ್ ರಾಜ್ಕುಮಾರ್ ಅವರ ಮೂರ್ತಿಯನ್ನು ತಯಾರು ಮಾಡಿರೋದು ಅವರ್ಸಾ ಗ್ರಾಮದ ಹಿರಿಯ ಕಲಾವಿದ ಕುಮ್ಮಣ್ಣ ಮೇತ್ರಿ ಮನೆತನದ ದಿನೇಶ ಮೇತ್ರಿ. ಮೇತ್ರಿ ಕುಟುಂಬ ಮೂರ್ತಿ ತಯಾರಿಕೆಯಲ್ಲಿ ಹಿಂದಿನಿಂದಲೂ ಪ್ರಖ್ಯಾತಿ ಗಳಿಸಿದ್ದಾರೆ. ವರ್ಷವಿಡೀ ಈ ಕುಟುಂಬದಲ್ಲಿ ಮೂರ್ತಿಗಳ ನಿರ್ಮಾಣ ಕಾರ್ಯ ನಡೆಯುತ್ತಲೇ ಇರುತ್ತದೆ. ಈ ಕುಟುಂಬದ ದಿನೇಶ ಮೇತ್ರಿ ಅವರು ಪುನೀತ್ ಹಾಗೂ ಗಣಪನನ್ನು ಕನ್ನಡದ ಕೋಟ್ಯಾಧಿಪತಿಯ ಸೆಟ್‌ನಲ್ಲಿ ಕೂತಂತೆ ತಯಾರು ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.