ಉತ್ತರಕನ್ನಡ(ಭಟ್ಕಳ):ಕೊರೊನಾ ಹಾಟ್ಸ್ಪಾಟ್ ಎಂದು ಗುರುತಿಸಿಕೊಂಡಿದ್ದ ಭಟ್ಕಳ ಪಟ್ಟಣ ಈಗ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತಿದೆ. ಆದರೆ ಈ ಸಂದರ್ಭದಲ್ಲಿ ಸರ್ಕಾರ ಪಟ್ಟಣವನ್ನ ಕಪ್ಪು ಚುಕ್ಕೆಯನ್ನಾಗಿ ಗುರುತಿಸಲು ಪ್ರಯತ್ನಿಸುತ್ತಿದೆ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಹೆಲ್ತ್ ಬುಲೆಟಿನ್ನಲ್ಲಿ ಭಟ್ಕಳವನ್ನ ಕಪ್ಪು ಚುಕ್ಕೆಯಾಗಿ ಗುರುತಿಸಲಾಗ್ತಿದೆ: ಸ್ಥಳೀಯರ ಅಸಮಾಧಾನ - Bhatkal News
ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೊರೊನಾ ಸೋಂಕಿತರು ಕಂಡು ಬಂದಿದ್ದಾರೆ. ಆದರೆ ರಾಜ್ಯ ಸರ್ಕಾರ ಹೊರಡಿಸುವ ಹೆಲ್ತ್ ಬುಲೆಟಿನ್ನಲ್ಲಿ ಕುಮಟಾ ಸೋಂಕಿತನನ್ನ ಹೊರತುಪಡಿಸಿದರೆ ಉಳಿದೆಲ್ಲಾ ಸೋಂಕಿತರ ವಾಸ ಸ್ಥಳವನ್ನ ಭಟ್ಕಳವೆಂದೇ ಉಲ್ಲೇಖಿಸಲಾಗಿದೆ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರತಿ ದಿನ ಹೊರಡಿಸುವ ಹೆಲ್ತ್ ಬುಲೆಟಿನ್ನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ ಸುಮಾರು 37 ಸೋಂಕಿತರ ವಾಸ ಸ್ಥಳವನ್ನು ಭಟ್ಕಳವೆಂದು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಜಿಲ್ಲೆಯ ಸಿದ್ದಾಪುರ, ಅಂಕೋಲ, ಹಳಿಯಾಳ ಹೊರತುಪಡಿಸಿ 9 ತಾಲೂಕುಗಳಲ್ಲೂ ಸೋಂಕಿತರು ಪತ್ತೆಯಾಗಿದ್ದಾರೆ. ಆದರೆ ಹೆಲ್ತ್ ಬುಲೆಟಿನ್ನಲ್ಲಿ ಕುಮಟಾ ಸೋಂಕಿತನನ್ನ ಹೊರತುಪಡಿಸಿದರೆ ಉಳಿದೆಲ್ಲಾ ಸೋಂಕಿತರ ವಾಸ ಸ್ಥಳವನ್ನ ಭಟ್ಕಳವೆಂದೇ ಉಲ್ಲೇಖಿಸಲಾಗಿದೆ. ಉದ್ದೇಶಪೂರ್ವಕವಾಗಿ ಭಟ್ಕಳದ ಹೆಸರು ಕೆಡಿಸಲು ಈ ರೀತಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಹಿಂದೆ ದೇಶದ ವಿವಿಧೆಡೆ ನಡೆದ ಭಯೋತ್ಪಾದಕ ಕೃತ್ಯಗಳಲ್ಲಿ ಭಟ್ಕಳ ಮೂಲದ ಕೆಲ ಯುವಕರು ಶಾಮೀಲಾದ ಕಾರಣ ಭಾರತದ ನಕಾಶೆಯಲ್ಲಿ ಕಪ್ಪು ಚುಕ್ಕೆಯಾಗಿ ಗುರುತಿಸಿಕೊಂಡ ಭಟ್ಕಳ, ಈಗ ಮತ್ತೆ ಕೊರೊನಾ ಕಾರಣದಿಂದಾಗಿ ಕಳಂಕಕ್ಕೆ ತುತ್ತಾಗುವಂತಾಗಿದೆ. ಪರಿಮಳದ ಮಲ್ಲಿಗೆ, ರುಚಿಕರ ಬಿರಿಯಾನಿಯಿಂದಾಗಿ ಎಲ್ಲೆಡೆ ಹೆಸರು ಮಾಡಿರುವ ಪಟ್ಟಣವೀಗ ಕೆಲವು ಕಳಂಕಕ್ಕೆ ತುತ್ತಾಗುತ್ತಿರುವುದು ವಿಪರ್ಯಾಸವೇ ಸರಿ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.