ಕಾರವಾರ (ಉತ್ತರ ಕನ್ನಡ) : ಹಳಿಯಾಳ ಪುರಸಭೆ ವ್ಯಾಪ್ತಿಯ ಪ್ರದೇಶದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಯೊಂದು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಹಿಂದೂಪರ ಸಂಘಟನೆಗಳು ಕರೆಕೊಟ್ಟ ಹಳಿಯಾಳ ಬಂದ್ ವೇಳೆ ಪೊಲೀಸರ ವಿರೋಧ ಲೆಕ್ಕಿಸದೇ ಕಾಮಗಾರಿ ಕೈಗೊಂಡ ಪ್ರದೇಶಕ್ಕೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿ ಅಳವಡಿಸಿದ್ದ ಸ್ಲ್ಯಾಬ್ಗಳನ್ನು ಕಿತ್ತೆಸೆದರು. ಮುಂಜಾಗೃತಾ ಕ್ರಮವಾಗಿ ತಾಲ್ಲೂಕಾಡಳಿತ ಈ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.
ಸಂಪೂರ್ಣ ವಿವರ: ಹಳಿಯಾಳದ ಪುರಸಭೆ ವ್ಯಾಪ್ತಿಯ ಮರಡಿ ಗುಡ್ಡದ ಬಳಿ ಇರುವ ಮಸೀದಿಯೆದುರು ಬನ್ನಿ ಮಂಟಪವಿದೆ. ಇಲ್ಲಿ ಪುರಸಭೆಯಿಂದ ಹಾಸು ಹುಲ್ಲು ಹಾಗೂ ಇಂಟರ್ ಲಾಕ್ಗಳನ್ನು ಅಳವಡಿಸಲಾಗಿತ್ತು. ಈ ಅಭಿವೃದ್ಧಿ ಕಾಮಗಾರಿಗಳನ್ನು ಪುರಸಭೆ ಒಂದು ಕೋಮಿಗೆ ಅನುಕೂಲವಾಗುವಂತೆ ಮಾಡುತ್ತಿದೆ. ಹಿಂದೂಗಳ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಯಾಗಲಿದೆ ಎಂದು ಹಿಂದೂಪರ ಕಾರ್ಯಕರ್ತರು ಆರೋಪಿಸಿ, ಕೆಲಸ ಸ್ಥಗಿತಗೊಳಿಸುವಂತೆ 15 ದಿನಗಳ ಹಿಂದೆ ಮನವಿ ಮೂಲಕ ಆಗ್ರಹಿಸಿದ್ದರು. ಇದಕ್ಕೆ ಪುರಸಭೆ ಸಭೆಯಲ್ಲೂ ಆಕ್ಷೇಪ ವ್ಯಕ್ತವಾಗಿತ್ತು.
ಇಷ್ಟಾದರೂ ಅಭಿವೃದ್ಧಿ ಕಾಮಗಾರಿ ನಡೆಸದ ಹಿನ್ನೆಲೆಯಲ್ಲಿ ಗ್ರಾಮದೇವಿ ಟ್ರಸ್ಟ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಬಂದ್ಗೆ ಕರೆ ನೀಡಲಾಗಿತ್ತು. ಅದರಂತೆ, ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಗ್ರಾಮದೇವಿ ಟ್ರಸ್ಟ್ ಅಧ್ಯಕ್ಷ ಮಂಗೇಶ ದೇಶಪಾಂಡೆ ನೇತೃತ್ವದಲ್ಲಿ ಇಂದು ಮುಂಜಾನೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ನೂರಾರು ಮಂದಿ ಹಳಿಯಾಳದ ಈದ್ಗಾ ಮೈದಾನದಿಂದ ಪ್ರತಿಭಟನಾ ರ್‍ಯಾಲಿ ಮೂಲಕ ದೇವಸ್ಥಾನ ಜಾಗಕ್ಕೆ ತೆರಳಿದರು. ಅಲ್ಲಿದ್ದ ಪೊಲೀಸ್ ಬಂದೋಬಸ್ತ್ ಮೀರಿ ಪುರಸಭೆಯಿಂದ ನಿರ್ಮಾಣವಾಗುತಿದ್ದ ನೆಲಹಾಸಿನ ಸಿಮೆಂಟ್ ಬ್ಲಾಕ್ಗಳನ್ನು ಕಿತ್ತುಹಾಕಿ ಈದ್ಗಾ ಮೈದಾನದ ಎದುರು ಹಿಂದೂ ಕಾರ್ಯಕರ್ತರು ಭಗವಾಧ್ವಜ ಹಾರಿಸಿದರು.