ಭಟ್ಕಳ:ತಾಲೂಕಿನಲ್ಲಿ ಕೊರೊನಾ ತಡೆಗೆ ಹೋರಾಡುತ್ತಿರುವ ಭಟ್ಕಳ ನಗರ ಠಾಣೆ ಪಿಎಸ್‍ಐ ಹನುಮಂತಪ್ಪ ಬಿ.ಕುಡಗುಂಟಿ ಅವರ ಸೇವೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಲಾಕ್ಡೌನ್ ಆದೇಶವಾದಾಗಿನಿಂದ ಜನ ಸಂಚಾರ ಮತ್ತು ಕೊರೊನಾ ವೈರಸ್ ಹತೋಟಿಗೆ ತರಲು ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ.
ಕೊರೊನಾ ಭೀತಿ ಹೆಚ್ಚಾಗುತ್ತಿದ್ದಂತೆ ರೋಗದ ಕುರಿತು ನಗರದಲ್ಲಿ ಜಾಗೃತಿ ಮೂಡಿಸಿದರು. ಸೋಂಕಿತರ ಪ್ರದೇಶವನ್ನು ಸೀಲ್ ಡೌನ್ ಮಾಡಿ, ಅಲ್ಲಿದ್ದವರಿಗೆ ಮನೆ ಬಿಟ್ಟು ಹೊರ ಬರಬೇಡಿ ಎಂದು ಮನವಿ ಮಾಡಿದರು. ರಾತ್ರಿ ವೇಳೆಯೂ ಸ್ವತಃ ಅವರೇ ಗಸ್ತು ತಿರುಗುತ್ತಿದ್ದರು.
ಪಿಎಸ್‍ಐ ಹನುಮಂತಪ್ಪ ಕುಡಗುಂಟಿ ಲಾಕ್ಡೌನ್ ನಡುವೆಯೂ ಬೇಕಾಬಿಟ್ಟಿ ಸಂಚರಿಸುತ್ತಿದ್ದ ಸವಾರರಿಗೆ ಲಾಠಿ ರುಚಿ ತೋರಿಸಿದರು. ಅಲ್ಲದೆ ರಾತ್ರಿ ವೇಳೆ ಸುತ್ತಾಡುವವರ ಮೇಲೂ ನಿಗಾ ಇಟ್ಟರು. ಹೀಗೆ ಅವರು ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಭಟ್ಕಳದಲ್ಲಿ ಕೊರೊನಾ ಪ್ರಕರಣಗಳು ಹತೋಟಿಗೆ ಬರಲು ಸಾಧ್ಯವಾಯಿತು. ಬಿಡುವಿಲ್ಲದೆ ಕೆಲಸ ಮಾಡುತ್ತಿರುವ ಹನುಮಂತಪ್ಪ ಅವರನ್ನು ತಾಲೂಕಿನ ಜನ ಕೊಂಡಾಡುತ್ತಿದ್ದಾರೆ.
ಹನುಮಂತಪ್ಪ ಅವರು ಕೊಪ್ಪಳದ ಯಲಬುರ್ಗಾ ತಾಲೂಕು ಮಸಬಾ ಅಂಚಿನಾಳ ಗ್ರಾಮದವರು. 1994-96ರಲ್ಲಿ ಭಟ್ಕಳದಲ್ಲಿ ಕಾನ್ಸ್ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಸೇರಿದರು. ಪಿಎಸ್‍ಐ ಆಗಿ ಬಡ್ತಿಯೂ ಪಡೆದಿದ್ದಾರೆ.