ಕರ್ನಾಟಕ

karnataka

ETV Bharat / state

ಘನತ್ಯಾಜ್ಯ ಘಟಕದ ಕಾರ್ಯ ಸ್ಥಗಿತಗೊಳಿಸುವಂತೆ ಕಡಸಲಗದ್ದೆ ಗ್ರಾಮಸ್ಥರಿಂದ‌ ಪ್ರತಿಭಟನೆ - batkala

ಕಲುಷಿತ ತ್ಯಾಜ್ಯದ ನೀರು ಕಸಲಗದ್ದೆ, ಬೆಳಲಖಂಡ, ಗುಳ್ಮೆ ಗ್ರಾಮಗಳ ಮನೆಗಳ ಬಾವಿ, ತೋಟಗಳಿಗೆ ಸೇರಿದ್ದರಿಂದ ಬೇಸತ್ತ ಗ್ರಾಮಸ್ಥರು ಪುರಸಭೆ ತ್ಯಾಜ್ಯ ಘಟಕಕ್ಕೆ ಬೀಗ ಜಡಿದು ಕಸ ಸಾಗಾಟದ ವಾಹನ ತಡೆಹಿಡಿದು ಪ್ರತಿಭಟನೆ ನಡೆಸಿದರು.

batkala
ಕಡಸಲಗದ್ದೆ ಗ್ರಾಮಸ್ಥರಿಂದ‌ ಪ್ರತಿಭಟನೆ

By

Published : Dec 19, 2019, 9:28 AM IST

ಭಟ್ಕಳ: ಇಲ್ಲಿನ ಪುರಸಭೆ ವ್ಯಾಪ್ತಿಯ ಸಾಗರ ರಸ್ತೆಯಲ್ಲಿನ ಪುರಸಭಾ ಘನತ್ಯಾಜ್ಯ ಘಟಕದಲ್ಲಿನ ಕಸ ಸಂಸ್ಕರಣೆ ನೀರನ್ನು ಪಂಪ್​ಸೆಟ್​ ಬಳಸಿ ಹೊರ ಹಾಕಲಾಗಿದ್ದು, ಇದರಿಂದಾಗಿ ದುರ್ವಾಸನೆಯುಕ್ತ ನೀರಿನಿಂದ ವಾತಾವರಣ ಮಲಿನಗೊಂಡಿದೆ. ಕಲುಷಿತ ತ್ಯಾಜ್ಯದ ನೀರು ಕಸಲಗದ್ದೆ, ಬೆಳಲಖಂಡ, ಗುಳ್ಮೆ ಗ್ರಾಮಗಳ ಮನೆಗಳ ಬಾವಿ, ತೋಟಗಳಿಗೆ ಸೇರಿದ್ದರಿಂದ ಬೇಸತ್ತ ಗ್ರಾಮಸ್ಥರು ಪುರಸಭೆ ತ್ಯಾಜ್ಯ ಘಟಕಕ್ಕೆ ಬೀಗ ಜಡಿದು ಕಸ ಸಾಗಾಟದ ವಾಹನ ತಡೆಹಿಡಿದು ಪ್ರತಿಭಟನೆ ನಡೆಸಿದರು.

ಕಡಸಲಗದ್ದೆ ಗ್ರಾಮಸ್ಥರಿಂದ‌ ಪ್ರತಿಭಟನೆ

ಕಳೆದ ಮಂಗಳವಾರ ಪುರಸಭೆ ಘನತ್ಯಾಜ್ಯ ಘಟಕದಿಂದ ಕಲುಷಿತ ನೀರನ್ನು ಹೊರ ಬಿಟ್ಟ ಹಿನ್ನೆಲೆಯಲ್ಲಿ ಸ್ಥಳೀಯರೆಲ್ಲರೂ ತ್ಯಾಜ್ಯ ಘಟಕದ ಎದುರು ಪ್ರತಿಭಟಿಸಿದ್ದರು. ಕಸ ಸಾಗಾಟದ ವಾಹನ ತಡೆಹಿಡಿದ ವಿಚಾರ ತಿಳಿದು ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ದೇವರಾಜ, ಆರೋಗ್ಯಾಧಿಕಾರಿ ಸುಜಿಯಾ ಸೋಮನ, ಎಂಜಿನಿಯರ್ ಮುಟ್ಟಳ್ಳಿ, ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒ ಹಾಗೂ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿದ್ದರು.

ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸ್ಥಳೀಯರು ಸಮಸ್ಯೆ ಅನುಭವಿಸುವಂತೆ ಮಾಡಿದ್ದಾರೆಂದು ಪುರಸಭೆ ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಈ ಮಧ್ಯೆ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು, ಸ್ಥಳಕ್ಕೆ ಸಹಾಯಕ ಆಯುಕ್ತರು, ತಹಶೀಲ್ದಾರ್ ಬರಬೇಕೆಂದು ಪಟ್ಟು ಹಿಡಿದ ಗ್ರಾಮಸ್ಥರ ಆಗ್ರಹಕ್ಕೆ ಕೊನೆಗೆ ತಹಶೀಲ್ದಾರ್​ ವಿ.ಪಿ.ಕೊಟ್ರಳ್ಳಿ ಭೇಟಿ ನೀಡಿ ಗ್ರಾಮಸ್ಥರ ಮನವಿ ಆಲಿಸಿದರು.

ನಂತರ ತಹಶೀಲ್ದಾರ್​ ಮಧ್ಯಸ್ಥಿಕೆಯಲ್ಲಿ ತ್ಯಾಜ್ಯ ಘಟಕದ ಗೇಟನ್ನು ತೆಗೆದು ಖುದ್ದು ತಹಶೀಲ್ದಾರ್​ ಕಸ ಸಂಸ್ಕರಣೆ ಘಟಕವನ್ನು ವೀಕ್ಷಿಸಿದ್ದು, ಮುಂದಿನ ದಿನದಲ್ಲಿ ಕಸ ಸಂಸ್ಕರಣೆಯ ನೀರನ್ನು ಹೊರ ಚೆಲ್ಲದಂತೆ ಪುರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿಭಟನೆ ನಡೆಸಲು ಪೊಲೀಸರ ಅನುಮತಿ ಅವಶ್ಯವಿದ್ದು, ಯಾವುದೇ ಅನುಮತಿಯಿಲ್ಲದೇ ಪ್ರತಿಭಟನೆ ನಡೆಸಿರುವ ಹಿನ್ನೆಲೆ ಗ್ರಾಮಸ್ಥರನ್ನು ಬಂಧಿಸಬೇಕಾಗುತ್ತದೆ ಎಂಬ ಪೊಲೀಸರ ಎಚ್ಚರಿಕೆಯ ಹಿನ್ನೆಲೆಯಲ್ಲಿ ಪ್ರತಿಭಟನೆ ನಿಲ್ಲಿಸಲಾಯಿತು.

ABOUT THE AUTHOR

...view details