ಕಾರವಾರ: ಮೊಗೇರ ಸಮುದಾಯದವರಿಗೆ ಕಳೆದ ಹಲವು ವರ್ಷಗಳಿಂದ ನೀಡುತ್ತಿದ್ದ ಪರಿಶಿಷ್ಟಜಾತಿ ಸೌಲಭ್ಯವನ್ನ ಸರ್ಕಾರ ಸ್ಥಗಿತಗೊಳಿಸಿದೆ. ಇದರಿಂದಾಗಿ ಕಷ್ಟಪಟ್ಟು ಓದಿ ಹತ್ತಾರು ಕ್ಷೇತ್ರದಲ್ಲಿ ಜೀವನ ಕಟ್ಟಿಕೊಳ್ಳಲು ಹವಣಿಸುತ್ತಿದ್ದವರು ಅತಂತ್ರರಾಗಿದ್ದಾರೆ. ಸೌಲಭ್ಯ ಮುಂದುವರಿಸುವಂತೆ ಕೊರಿ ಮೊಗೇರ ಸಮುದಾಯದ ಜನ, ವಿದ್ಯಾರ್ಥಿಗಳು ಪ್ರಧಾನಿ ಮೋದಿಗೆ ಪತ್ರ ಬರೆಯುವ ಮೂಲಕ ಪತ್ರ ಚಳವಳಿ ಆರಂಭಿಸಿದ್ದಾರೆ.
ಭಟ್ಕಳ ತಾಲೂಕಿನಲ್ಲಿ ಮೊಗೇರ ಸಮುದಾಯದ ಜನರ ಪ್ರತಿಭಟನೆ ಜೋರಾಗಿದೆ. ಕಳೆದ 14 ದಿನಗಳಿಂದ ಭಟ್ಕಳದ ಮಿನಿವಿಧಾನ ಸೌಧ ಎದುರು ಪರಿಶಿಷ್ಟರ ಸೌಲಭ್ಯಕ್ಕಾಗಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದ್ರೂ ಸಹ ಸರ್ಕಾರದ ಯಾವೊಬ್ಬ ಜನಪ್ರತಿನಿಧಿಗಳು ಕಣ್ಣೆತ್ತಿಯೂ ನೋಡುತ್ತಿಲ್ಲ. ಇನ್ನೂ ಅಧಿಕಾರಿಗಳಂತೂ ಕ್ಯಾರೆ ಮಾಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಧರಣಿ ಸ್ಥಳದಿಂದ ಕೂಗಳತೆ ದೂರದಲ್ಲಿ ಸಾಗಿದರೂ ಮನವಿ ಆಲಿಸುವ ಪ್ರಯತ್ನ ಮಾಡಿಲ್ಲ. ಇದು ಮೊಗೇರ ಜನಾಂಗದ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದೇ ಕಾರಣಕ್ಕೆ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಸಮುದಾಯದ ಮಂದಿ ಹಾಗೂ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಪತ್ರ ಚಳವಳಿ ಆರಂಭಿಸಿದ್ದಾರೆ. ನಾವು ಇಷ್ಟು ವರ್ಷ ಪರಿಶಿಷ್ಟ ಸೌಲಭ್ಯ ಪಡೆದು ವಿದ್ಯಾಭ್ಯಾಸ ಮಾಡುತ್ತಿದ್ದೇವೆ. ಇದೀಗ ನಮಗೆ ಎಸ್ಸಿ ಸರ್ಟಿಫಿಕೇಟ್ ನೀಡಲು ಹಿಂದೇಟು ಹಾಕಲಾಗುತ್ತಿದೆ. ಇದರಿಂದ ನಮ್ಮ ಮುಂದಿನ ಜೀವನಕ್ಕೆ ಸರ್ಕಾರವೇ ಅಡ್ಡಿಯಾಗುತ್ತಿದೆ. ವಿದ್ಯಾಭ್ಯಾಸ, ಉದ್ಯೋಗ, ಸರ್ಕಾರಿ ಸೌಲಭ್ಯ ಪಡೆಯಲು ಜಾತಿ ಪ್ರಮಾಣ ಪತ್ರಗಳು ಅವಶ್ಯವಾಗಿದ್ದು, ಎಸ್ಸಿ ಸರ್ಟಿಫಿಕೇಟ್ನ್ನು ಕೂಡಲೇ ಒದಗಿಸಬೇಕು. ಇಲ್ಲದೇ ಇದ್ದಲ್ಲಿ ನಾವು ಮುಂದಿನ ದಿನಗಳಲ್ಲಿ ಶಾಲೆಯಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಇದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.