ಕಾರವಾರ: ಕಳೆದ 7 ವರ್ಷಗಳಿಂದ ಡಾಂಬರು ಕಾಣದ ದಿನಕ್ಕೆ 20 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುವ ಯಲ್ಲಾಪುರ ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63ರ ಅವ್ಯವಸ್ಥೆಯ ವಿರುದ್ಧ ನಾಗರಿಕರು ಸಿಡಿದೆದ್ದಿದ್ದಾರೆ. ಎಷ್ಟೋ ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನಕ್ಕೆ ಬಾರದಕ್ಕೆ ಹೆದ್ದಾರಿಯ ಮೇಲೆ ನರ್ಸರಿ ಗಿಡಗಳನ್ನಿಟ್ಟು ವಿನೂತನವಾಗಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಅಂಕೋಲಾದಿಂದ ಯಲ್ಲಾಪುರ ಹುಬ್ಬಳ್ಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 63 ಸಂಚಾರಕ್ಕೆ ಸಂಚಕಾರ ಇದ್ದಂತೆ. ಹೆದ್ದಾರಿಯಲ್ಲಿ ನೂರಾರು ಗುಂಡಿಗಳು ಬಿದ್ದಿದ್ದು, ಅಲ್ಲಲ್ಲಿ ಡಾಂಬರುಗಳು ಎದ್ದು ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಎಷ್ಟೇ ಮನವಿ ಮಾಡಿದರೂ ತಲೆಕೆಡಿಸಿಕೊಳ್ಳದ ಇಲಾಖೆಗಳ ವಿರುದ್ಧ ಸಿಡಿದೆದ್ದ ಅಂಕೋಲಾ ತಾಲೂಕಿನ ಸುಂಕಸಾಳ ಪಂಚಾಯಿತಿ ವ್ಯಾಪ್ತಿಯ ಹೆಬ್ಬುಳ, ಮಾಸ್ತಿಕಟ್ಟೆ, ಸುಂಕಸಾಳ, ಕೊಡ್ಲಗದ್ದೆ, ರಾಮನಗುಳಿ, ವಜ್ರಳ್ಳಿ ಭಾಗದ ಗ್ರಾಮಸ್ಥರಿಂದು ಕರವೇ ಗ್ರಾಮೀಣ ಘಟಕದ ಸಹಯೋಗದೊಂದಿಗೆ ಹೆದ್ದಾರಿಯಲ್ಲಿ ಬಾಳೆ, ಅಡಕೆ ಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಧಿಕ್ಕಾರ ಕೂಗಿ, ಕಣ್ಮುಚ್ಚಿ ಕುಳಿತ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.