ಶಿರಸಿ:ತಾಲೂಕಿನ ನಾರಾಯಣಗುರು ನಗರಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಯಾವುದೇ ವ್ಯವಹಾರ ಕೈಗೊಳ್ಳುವಂತಿಲ್ಲ ಎಂದು ಆದೇಶ ಹೊರಡಿಸಿದ್ದು, ಅದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ನಾರಾಯಣಗುರು ಹಿತರಕ್ಷಣಾ ಸಮಿತಿಯವರು ಸಹಾಯಕ ಆಯುಕ್ತರ ಕಚೇರಿ ಎದುರು ಧರಣಿ ನಡೆಸಿದರು.
ನಿವೇಶನದ ಹಕ್ಕಿದ್ದರೂ ಡಿಸ್ ಫಾರೆಸ್ಟ್ ಆಗಿಲ್ಲವೆಂಬ ಕಾರಣಕ್ಕೆ ಯಾವುದೇ ವ್ಯವಹಾರ ಕೈಗೊಳ್ಳಬಾರದು ಎಂದು ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಅದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ನಾರಾಯಣಗುರು ನಗರದ ಸುಮಾರು 500ಕ್ಕೂ ಅಧಿಕ ನಿವಾಸಿಗಳು ಧರಣಿ ನಡೆಸಿದರು.
ಶಿರಸಿಯಲ್ಲಿ ನಾರಾಯಣಗುರು ಹಿತರಕ್ಷಣಾ ಸಮಿತಿಯಿಂದ ಧರಣಿ ಕಂದಾಯ ಹಾಗೂ ಅರಣ್ಯ ಇಲಾಖೆಗಳ ನಡುವಿನ ಡಿಸ್ ಫಾರೆಸ್ಟ್ ಸಂಘರ್ಷ ಆಯಾ ಇಲಾಖೆಗಳೇ ಬಗೆಹರಿಸಬೇಕು. ಈ ವಿಷಯದಲ್ಲಿ ನಿವಾಸಿಗಳನ್ನು ಅತಂತ್ರ ಮಾಡುವುದು ಸರಿಯಲ್ಲ. ಇದಕ್ಕೆ ಪೂರಕ ಪ್ರಸ್ತಾವನೆ ಕಳುಹಿಸಿ ಡಿಸ್ ಫಾರೆಸ್ಟ್ ಆಗುವಂತೆ ಕ್ರಮ ಕೈಗೊಳ್ಳಬೇಕು ಹೊರತು ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗುವಂತೆ ಮಾಡಬಾರದು ಎಂದು ನಿವಾಸಿಗಳು ಒತ್ತಾಯಿಸಿದರು.
ಸರ್ಕಾರವೇ ನಾರಾಯಣಗುರು ನಗರದ ಸ.ನಂ. 53ರಲ್ಲಿ ಕೆಜೆಪಿ ಮಾಡಿ 497 ನಿವೇಶನಗಳನ್ನು ಗುರುತಿಸಿ ನಕ್ಷೆ ತಯಾರಿಸಿ ಫಲಾನುಭವಿಗಳಿಗೆ ನಾಲ್ಕೈದು ಹಂತದಲ್ಲಿ ನಿವೇಶನ ವಿತರಿಸುತ್ತಾ ಬಂದಿದ್ದು, ಇದರ ಆಧಾರದಲ್ಲಿ ನಿವಾಸಿಗಳು ಮನೆ ಕಟ್ಟಿಕೊಂಡಿದ್ದಾರೆ. ಆದರೆ ಡಿಸ್ ಫಾರೆಸ್ಟ್ ಆಗಿಲ್ಲವೆಂಬ ಕಾರಣವೊಡ್ಡಿ 14-11-2018ರಲ್ಲಿ ತಹಶೀಲ್ದಾರರು ಈ ಪ್ರದೇಶದಲ್ಲಿ ಯಾವುದೇ ವ್ಯವಹಾರ ನಡೆಸಬಾರದು ಎಂದು ಆದೇಶಿಸಿದ್ದಾರೆ. ಸಮಸ್ಯೆ ಜನಪ್ರತಿನಿಧಿಗಳ ಅಸಹಕಾರದಿಂದ ಆಗಿದ್ದು, ತಕ್ಷಣವೇ ಸಮಸ್ಯೆ ಬಗೆಹರಿಸಲು ಅವರು ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.