ಕಾರವಾರ: ಟೋಲ್ ಸಂಗ್ರಹದಲ್ಲಿ ಸ್ಥಳೀಯರಿಗೆ ನೀಡಿದ ವಿನಾಯತಿಯನ್ನು ಏಕಾಏಕಿ ರದ್ದುಪಡಿಸಿರುವುದನ್ನು ವಿರೋಧಿಸಿ ಸ್ಥಳೀಯರು ಟೋಲ್ ಗೇಟ್ ಬಳಿಯ ಕಂಪನಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ಕುಮಟಾ ತಾಲೂಕಿನ ಹೊಳೆಗದ್ದೆ ಟೋಲ್ ಬಳಿ ನಡೆದಿದೆ.
ಕಾರವಾರದಿಂದ ಕುಂದಾಪುರದವರೆಗೆ ಚತುಷ್ಪಥಗೊಳಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಮಟಾ ಹಾಗೂ ಅಂಕೋಲಾ ಬಳಿ ಟೋಲ್ ಸಂಗ್ರಹ ಕೇಂದ್ರ ತೆರೆಯಲಾಗಿದೆ. ಆದರೆ ಅರೆಬರೆ ಕಾಮಗಾರಿ ನಡುವೆಯೂ ಇತ್ತೀಚೆಗೆ ಸುಂಕ ವಸೂಲಾತಿಗೆ ಮುಂದಾಗಿರುವ ಕ್ರಮಕ್ಕೆ ಸಾರ್ವಜನಿಕರು ವಿರೋಧಿಸಿ ಧರಣಿ ನಡೆಸಿದರು.
ಹೊಳೆಗದ್ದೆ ಟೋಲ್ ಶುಲ್ಕದಲ್ಲಿ ಸ್ಥಳೀಯರಿಗೆ ವಿನಾಯಿತಿ ನೀಡುವಂತೆ ಪ್ರತಿಭಟನೆ ಈ ಹಿಂದೆ ಕೆಎ 30, 47 ವಾಹನಗಳಿಗೆ ವಿನಾಯಿತಿ ನೀಡಲಾಗಿತ್ತು. ಆದರೆ ಭಾನುವಾರ ತಡರಾತ್ರಿಯಿಂದ ಏಕಾಏಕಿ ಪ್ರಾರಂಭಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಟೋಲ್ ಬಳಿ ಸೇರಿದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸ್ಥಳೀಯರು ಕಂಪನಿಯ ಕ್ರಮವನ್ನು ಖಂಡಿಸಿ, ಕೂಡಲೇ ವಿನಾಯಿತಿ ನೀಡುವಂತೆ ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಕುಮಟಾ ತಹಶೀಲ್ದಾರ್, ಸರ್ಕಾರ ಈಗಾಗಲೇ ತಿರ್ಮಾನಿಸಿ ಆದೇಶಿದಂತೆ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ. ಸ್ಥಳೀಯರಿಗೆ ಹಾಗೂ ನಿತ್ಯ ಓಡಾಡುವ ವಾಹನಗಳಿಗೆ ತಿಂಗಳ ಪಾಸ್ ನೀಡಲು ದರ ನಿಗದಿ ಮಾಡಿದ್ದು, ಅದನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಜನಪ್ರತಿನಿಧಿಗಳು ಹಾಗೂ ಕಂಪನಿ ಅಧಿಕಾರಿಗಳು ನಿಗದಿಪಡಿಸಿರುವ ದರಕ್ಕೆ ನಮ್ಮ ಒಪ್ಪಿಗೆ ಇಲ್ಲ. ಸ್ಥಳೀಯರಾದ ನಮಗೆ ವಿನಾಯಿತಿಯ ಅಗತ್ಯವಿದೆ. ಕೂಡಲೇ ಈ ಬಗ್ಗೆ ಸೂಕ್ತ ತಿರ್ಮಾನ ಕೈಗೊಳ್ಳಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.