ಕಾರವಾರ:ಸಂತಾನಹರಣ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಬಾಣಂತಿ ಸಾವಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ಆರೋಗ್ಯವಾಗಿದ್ದ ಬಾಣಂತಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಕಾರವಾರದಲ್ಲಿಂದು ಮೀನುಗಾರ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿದರು. ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅಮಾನತ್ತುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 1ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಸರ್ವೋದಯ ನಗರದ ನಿವಾಸಿ ಗೀತಾ ಬಾನಾವಳಿಕರ್ ಮೂರು ದಿನಗಳ ಬಳಿಕ ಸಂತಾನಹರಣ ಚಿಕಿತ್ಸೆಗೆ ದಾಖಲಾಗಿದ್ದಳು. ಆದರೆ ಶಸ್ತ್ರ ಚಿಕಿತ್ಸೆ ವೇಳೆ ಗಂಭೀರಗೊಂಡಿದ್ದ ಬಾಣಂತಿ ಬಳಿಕ ಸಾವನ್ನಪ್ಪಿದ್ದಳು.
ಬಾಣಂತಿ ಸಾವಿನಿಂದ ಆಕ್ರೋಶಗೊಂಡ ಸ್ಥಳೀಯರು ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಗೀತಾಳ ಸಾವಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯ ಶಿವಾನಂದ ಕುಡ್ತಲ್ಕರ್ ಅವರ ನಿರ್ಲಕ್ಷ್ಯವೇ ಕಾರಣ. ಶಸ್ತ್ರ ಚಿಕಿತ್ಸೆ ವೇಳೆ ಅನಸ್ತೇಶಿಯಾ ಓವರ್ ಡೋಸ್ ಆಗಿದೆ. ಅರವಳಿಕೆ ತಜ್ಞರು ನೀಡಬೇಕಿದ್ದ ಚುಚ್ಚು ಮದ್ದನ್ನು ಇವರೇ ನೀಡಿದ್ದು, ಇದರಿಂದಲೇ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ.