ಕಾರವಾರ: ಮುಖ್ಯ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿ ಮೀನುಗಾರ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ಮಾರುಕಟ್ಟೆ ಬಳಿ ಕಳೆದ ಮೂರು ವರ್ಷಗಳಿಂದ ನಿರ್ಮಿಸುತ್ತಿರುವ ನೂತನ ಮೀನು ಮಾರುಕಟ್ಟೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದರೆ, ತಾತ್ಕಾಲಿಕವಾಗಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿರ್ಮಿಸಿದ್ದ ಮೀನು ಮಾರುಕಟ್ಟೆ ಶಿಥಿಲಾವಸ್ಥೆ ತಲುಪಿದ್ದು, ಇದೀಗ ಚತುಷ್ಪಥ ಹೆದ್ದಾರಿಗೆ ಒತ್ತುವರಿಯಾಗಿದೆ. ಇದರಿಂದ ಇಕ್ಕಟ್ಟಾದ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ.
ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಮೀನುಗಾರ ಮಹಿಳೆಯರ ಪ್ರತಿಭಟನೆ ಈ ಹಿಂದೆ ಕಾರವಾರ ಉಪ ವಿಭಾಗಾಧಿಕಾರಿ ಅಭಿಜಿನ್ ಬಿ, ಗಾಂಧಿ ಮಾರುಕಟ್ಟೆ ಬಳಿ ಅಂಗಡಿ ತೆರವಿಗೆ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರ ವಿಚಾರಣೆ ಜೂ.10 ರಂದು ನಡೆಯಲಿದ್ದು, ಬಳಿಕ ಚರ್ಚಿಸಿ ಅಂತಿಮ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ನೀಡಿದ ಅವಧಿ ಮುಗಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದು ಮೀನುಗಾರ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಇದಕ್ಕೆ ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕ ಸತೀಶ್ ಸೈಲ್ ಹಾಗೂ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಬೆಂಬಲ ನೀಡಿ ತ್ವರಿತಗತಿಯಲ್ಲಿ ಮೀನುಮಾರುಕಟ್ಟೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಹಳೆ ಮೀನುಮಾರುಕಟ್ಟೆ ತೆರವುಗೊಳಿಸಿದ ಬಳಿಕ ಹೊಸ ಮೀನುಮಾರುಕಟ್ಟೆಗೆ ನೀಲನಕ್ಷೆ ತಯಾರಿಸಿದ್ದು, ಅದರಂತೆ ಕಟ್ಟಡ ನಿರ್ಮಾಣವಾಗುತ್ತಿದೆ. ಆದರೆ, ಜಾಗದಲ್ಲಿನ ಕೆಲ ದಿನಸಿ ಅಂಗಡಿಕಾರರು ನ್ಯಾಯಾಲಯದ ಮೊರೆ ಹೊಗಿದ್ದು, ಇದು ನಿರ್ಮಾಣಕ್ಕೆ ತಡೆಯಾಗಿದೆ. ಪ್ರಕರಣದ ವಿಚಾರಣೆ ಇದೆ 27 ರಂದು ನಡೆಯಲಿದ್ದು, ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಮೀನುಮಾರುಕಟ್ಟೆ ನಿರ್ಮಾಣ ಮಾಡುತ್ತೇವೆ. ಇಲ್ಲವೆ, ತಾತ್ಕಾಲಿಕ ಮೀನುಮಾರುಕಟ್ಟೆ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ತಿಳಿಸಿದ್ದಾರೆ.