ಶಿವಮೊಗ್ಗ/ಶಿರಸಿ:ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೋಲೆ ಮಾಡುತ್ತಿದೆ ಎಂದು ಆರೋಪಿಸಿ ಶಿರಸಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಪೋಸ್ಟ್ ಆಫೀಸ್ ವೃತ್ತದ ಬಳಿ ಸೇರಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆಗಳನ್ನುಕೂಗಿದರು. ಯಡಿಯೂರಪ್ಪ, ಆರ್.ಅಶೋಕ್ ಸೇರಿದಂತೆ ಇನ್ನಿತರ ಮುಖಂಡರ ವಿರುದ್ಧ ಆಪರೇಶನ್ ಕಮಲ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಳೆ-ಗಾಳಿಯನ್ನೂ ಲೆಕ್ಕಿಸದೆ ಕೊಡೆ ಹಿಡಿದು ಅರ್ಧ ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಲಾಯಿತು.
ಇನ್ನು ಶಿವಮೊಗ್ಗದಲ್ಲಿ ಸಹ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಮುಂಬೈನಲ್ಲಿ ಬಂಧನ ಮಾಡಿರುವುದನ್ನು ವಿರೋಧಿಸಿ ಎನ್ಎಸ್ಯುಐ ಪ್ರತಿಭಟನೆ ನಡೆಸಿತು. ಮುಂಬೈನಲ್ಲಿ ಇರುವ ಅತೃಪ್ತ ಶಾಸಕರನ್ನು ಭೇಟಿಯಾಗಲು ಹೋಗಿದ್ದ ವೇಳೆ ಸಚಿವ ಡಿಕೆಶಿಯನ್ನು ಬಂಧನ ಮಾಡಲಾಗಿತ್ತು. ಸಚಿವ ಡಿ.ಕೆ.ಶಿವಕುಮಾರ ಬಂಧನಕ್ಕೆ ಬಿಜೆಪಿ ಕಾರಣ ಎಂದು ಆರೋಪಿಸಿ ನಗರದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ನಿಂದ ಪ್ರತಿಭಟನೆ ಶಾಸಕರಿಗೆ ಆಮಿಷ ತೋರಿ ಅವರನ್ನು ಮುಂಬೈಗೆ ಕಳುಹಿಸಲಾಗಿದೆ. ಓರ್ವ ಸಚಿವರನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎಂಬ ಕನಿಷ್ಟ ಜ್ಞಾನ ಮಹಾರಾಷ್ಟ್ರ ಬಿಜೆಪಿ ಸರ್ಕಾರಕ್ಕೆ ಇಲ್ಲದಂತಾಗಿದೆ ಎಂದು ದೂರಿದರು.
ಸಚಿವ ಶಿವಕುಮಾರರನ್ನು ಕಾನೂನು ಬಾಹಿರವಾಗಿ ಬಂಧನ ಮಾಡಿದೆ. ಅಲ್ಲದೆ ಅವರನ್ನು ಮುಂಬೈನಿಂದ ವಾಪಸ್ ಕಳುಹಿಸಿರುವುದು ಖಂಡನೀಯ. ರಾಜ್ಯ ಸರ್ಕಾರವನ್ನು ಅಲುಗಾಡಿಸುವ ಯತ್ನವನ್ನು ಕೇಂದ್ರದ ಅಮಿತ್ ಶಾ ಹಾಗೂ ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.