ಕಾರವಾರ:ಸೂಕ್ತ ಮಾಹಿತಿ ಇಲ್ಲದೆ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕಾನೂನು ಸಚಿವ ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸಣ್ಣ ನೀರಾವರಿ ಇಲಾಖೆ ಪ್ರಗತಿ ಪರಿಶೀಲನೆ ಆಗಮಿಸಿದ ಅಧಿಕಾರಿಗಳು ಮಾಹಿತಿ ನೀಡಲು ಪರದಾಡಿದರು. ಯಾವ ಕಾಮಗಾರಿ ಬಗ್ಗೆ ಕೇಳಿದರೂ ಸ್ಪಷ್ಟ ಮಾಹಿತಿ ನೀಡಲಿಲ್ಲ. ಅಷ್ಟೇ ಅಲ್ಲ, ಟೆಂಡರ್ ಪ್ರಕಟಣೆ ಬಗ್ಗೆಯೂ ವಿವರ ನೀಡದ ಅಧಿಕಾರಿಗಳಿಗೆ ಸಚಿವ ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡರು.
ಗ್ರಹಣ ಬಿಡಿಸಿದ ಸಚಿವ ಮಾಧುಸ್ವಾಮಿ ಯಾವ ಕಾಮಗಾರಿ ಎಷ್ಟು ವೆಚ್ಚವಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಇಲಾಖೆಯ ವರದಿ ಪತ್ರದಲ್ಲಿ ಒಂದು ಮಾಹಿತಿ ಇರುವುದೇ ಬೇರೇ. ನೀವೇ ಒಂದು ಮಾಹಿತಿ ನೀಡುತ್ತಿದ್ದೀರಾ. ಬರೆಯುವಾಗ ಕುಡಿದು ಸಿದ್ದಪಡಿಸಿದ್ಧೀರಾ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಇಬ್ಬರು ಅಧಿಕಾರಿಗಳನ್ನು ಈಗಾಗಲೇ ಮನೆಗೆ ಕಳುಹಿಸಿದ್ದೇನೆ. ನೀವು ಮನೆಗೆ ಹೋಗುವ ಆಸೆಯಿದೆಯೇ ಎಂದು ಎಚ್ಚರಿಕೆ ನೀಡಿದ ಅವರು, ಸರ್ಕಾರದಿಂದ ಸಂಬಳ ತೆಗೆದುಕೊಳ್ಳುತ್ತೀರಾ, ಕೆಲಸ ಮಾಡದೇ ಇರಲು ನಾಚಿಕೆಯಾಗುವುದಿಲ್ಲವೇ? ಎಂದು ಕಿಡಿಕಾರಿದರು.
ಸೂಕ್ತ ಮಾಹಿತಿ ನೀಡದ ಮತ್ತು ಸಮರ್ಪಕ ಕೆಲಸ ನಿರ್ವಹಿಸದ ಹಿನ್ನೆಲೆಯಲ್ಲಿ ಮುಂಡಗೋಡ ಎಂಜಿನಿಯರ್ ಮುರುಳೀಧರ್ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಸಚಿವರ ಸೂಚಿಸಿದರು.