ಕಾರವಾರ: ಕರಾವಳಿ ನಗರಿ ಕಾರವಾರ ತಾನು ಹೊಂದಿರುವ ವಿಶಾಲವಾದ ಕಡಲ ತೀರದಿಂದಲೇ ನಿತ್ಯ ನೂರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅದರಲ್ಲೂ ಇಲ್ಲಿನ ಕಡಲತೀರಕ್ಕೆ ಹೊಂದಿಕೊಂಡೇ ಇರುವ ರಾಜ್ಯದ ಏಕೈಕ ಯುದ್ಧನೌಕೆ ವಸ್ತುಸಂಗ್ರಹಾಲಯ ಪ್ರವಾಸಿಗರ ನೆಚ್ಚಿನ ತಾಣಗಳಲ್ಲೊಂದಾಗಿದೆ. ಇದೀಗ ಇದಕ್ಕೆ ಹೊಸ ಸೇರ್ಪಡೆ ಎನ್ನುವಂತೆ ಕಡಲತೀರಕ್ಕೆ ಯುದ್ಧ ವಿಮಾನ ವಸ್ತುಸಂಗ್ರಹಾಲಯವೊಂದು ಸೇರ್ಪಡೆಯಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ವಿಮಾನವನ್ನು ಕೂಡ ಕಣ್ತುಂಬಿ ಕೊಳ್ಳಬಹುದಾಗಿದೆ.
ಹೌದು ಕರಾವಳಿ ನಗರಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಇಷ್ಟು ದಿನ ಇಲ್ಲಿನ ಐಎನ್ಎಸ್ ಚಾಪೆಲ್ ಯುದ್ಧನೌಕೆ ವಸ್ತುಸಂಗ್ರಹಾಲಯ ಆಕರ್ಷಣೆಯ ತಾಣವಾಗಿತ್ತು. ಇದೀಗ ಇದಕ್ಕೆ ಹೊಸ ಸೇರ್ಪಡೆ ಎನ್ನುವಂತೆ ನೌಕಾಸೇನೆಯಿಂದ ನಿವೃತ್ತಿ ಹೊಂದಿರುವ ಯುದ್ಧ ವಿಮಾನ ಟುಪೆಲೊವ್-142ನ್ನು ಇದೇ ಯುದ್ಧನೌಕೆ ಪಕ್ಕದಲ್ಲಿ ಮ್ಯೂಸಿಯಂ ಆಗಿ ಸ್ಥಾಪನೆ ಮಾಡಲಾಗುತ್ತಿದೆ.
ವಸ್ತುಸಂಗ್ರಹಾಲಯಕ್ಕಾಗಿ ಯುದ್ಧ ವಿಮಾನ ನೀಡುವ ಕುರಿತು ಉತ್ತರಕನ್ನಡ ಜಿಲ್ಲಾಡಳಿತ ಹಾಗೂ ನೌಕಾನೆಲೆಯೊಂದಿಗೆ ಕಳೆದ 3 ವರ್ಷಗಳ ಹಿಂದೆಯೇ ಒಪ್ಪಂದ ಆಗಿತ್ತು. ಆದರೆ, ಆ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆಯಿಂದ ಯುದ್ಧ ವಿಮಾನವನ್ನು ಚೆನ್ನೈನಿಂದ ಕಾರವಾರಕ್ಕೆ ಸ್ಥಳಾಂತರ ಮಾಡುವುದು ವಿಳಂಬವಾಗಿತ್ತು. ಇದೀಗ ಯುದ್ಧ ವಿಮಾನ ಸ್ಥಳಾಂತರ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಶೀಘ್ರದಲ್ಲೇ ಕಾರವಾರ ತಲುಪಲಿದೆ. ಈಗಾಗಲೇ ಯುದ್ಧವಿಮಾನ ಸ್ಥಾಪನೆಗೆ ಪಿಲ್ಲರ್ ಸೇರಿದಂತೆ ಅಗತ್ಯ ಕಾಮಗಾರಿಗಳು ಪೂರ್ಣಗೊಳ್ಳುವ ಹಂತ ತಲುಪಿದ್ದು, ಇನ್ನೆರಡು ತಿಂಗಳಲ್ಲಿ ಯುದ್ಧ ವಿಮಾನ ಮ್ಯೂಸಿಯಂ ಆಗಿ ಪ್ರವಾಸಿಗರ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಾಹಿತಿ ನೀಡಿದ್ದಾರೆ.