ಕಾರವಾರ: ಬಾಣಂತಿ ಸಾವಿನ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ. ಶಿವಾನಂದ ಕುಡ್ತಲ್ಕರ್ ಅವರು, 'ತನ್ನದೇನು ತಪ್ಪಿಲ್ಲ' ಎಂದು ಕಣ್ಣೀರು ಸುರಿಸಿದ ಘಟನೆ ನಡೆದಿದೆ.
ಕಾರವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟ ಬಾಣಂತಿ ಗೀತಾ ಬಾನಾವಳಿಕರ್ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪದ ಹಿನ್ನೆಲೆಯಲ್ಲಿ ಡಾ. ಶಿವಾನಂದ ಕುಡ್ತಲ್ಕರ್ ವಿಚಾರಣೆಗೆ ಜಿಲ್ಲಾ ಪಂಚಾಯಿತಿಗೆ ಆಗಮಿಸಿದ್ದರು.
ಕಣ್ಣೀರು ಹಾಕುತ್ತ ಅಲವತ್ತುಕೊಳ್ಳುತ್ತಿರುವ ವಿಚಾರಣಾಧೀನ ವೈದ್ಯ ತನಿಖಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಓ ಎಂ ರೋಶನ್ ನೇತೃತ್ವದ ತನಿಖಾ ತಂಡದ ವಿಚಾರಣೆ ಎದುರಿಸಿ ವಾಪಸ್ಸ್ ಆಗಿದ್ದರು. ಇದೇ ವೇಳೆ ಜಿಲ್ಲಾ ಪಂಚಾಯತಿ ಎದುರು ನೆರೆದಿದ್ದ ಮೀನುಗಾರರು ಹಾಗೂ ಮುಖಂಡರ 'ಎದುರು ತಮ್ಮದೇನು ತಪ್ಪಿಲ್ಲ. ನಾನು 11 ವರ್ಷದ ಸೇವೆಯಲ್ಲಿ ಎಷ್ಟು ಜೀವಗಳನ್ನು ಉಳಿಸಿದ್ದೇನೆ. ಈ ಪ್ರಕರಣದಲ್ಲಿಯೂ ನಾನು ನಿಷ್ಠೆಯಿಂದ ಚಿಕಿತ್ಸೆ ನೀಡಿದ್ದೇನೆ' ಎಂದು ಕಣ್ಣೀರು ಸುರಿಸಿದರು.
ಬಳಿಕ ಮೀನುಗಾರ ಮುಖಂಡರು,'ನಿಮ್ಮ ತಪ್ಪು ಇಲ್ಲದೆ ಇದ್ದರೇ ಇಷ್ಟರೊಳಗೆ ಸ್ಪಷ್ಟನೆ ನೀಡಬೇಕಿತ್ತು. ಯಾರು ಸಾವಿಗೆ ಕಾರಣ ಎಂಬುದು ಸ್ಪಷ್ಟಪಡಿಸಿ' ಎಂದು ಪಟ್ಟುಹಿಡಿದರು. ಅಷ್ಟರಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಶಿವಾನಂದ್ ಕುಡ್ತಲ್ಕರ್ ಅವರನ್ನು ಕಳುಹಿಸಿಕೊಟ್ಟರು.