ಕಾರವಾರ: ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದ ತಳಕೇಬೈಲ್ ಪ್ರದೇಶದಲ್ಲಿ ಕಳೆದ ತಿಂಗಳು ಸುರಿದ ಧಾರಾಕಾರ ಮಳೆಗೆ ಗುಡ್ಡ ಕುಸಿತ ಉಂಟಾಗಿ ಪ್ರಪಾತ ನಿರ್ಮಾಣವಾಗಿದೆ. ಸದ್ಯ ಇದನ್ನು ಪ್ರವಾಸಿತಾಣವೆಂಬಂತೆ ಜನ ನೋಡಲು ಬರುತ್ತಿದ್ದಾರೆ.
ಗುಡ್ಡ ಕುಸಿದ ಸ್ಥಳದಲ್ಲಿ ಪ್ರಪಾತ ಸೃಷ್ಟಿ ತಳಕೇಬೈಲ್ ಪ್ರದೇಶದಲ್ಲಿ ಕಳೆದ ಜುಲೈ ತಿಂಗಳ ಅಂತ್ಯದಲ್ಲಿ ಸುರಿದ ಮಳೆಗೆ ದೊಡ್ಡ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದ್ದು, ಸಂಪರ್ಕ ರಸ್ತೆಯೇ ಕಡಿತಗೊಂಡಿತ್ತು. ಗುಡ್ಡ ಕುಸಿತ ಉಂಟಾದ ಪರಿಣಾಮ ಎಕರೆಗಟ್ಟಲೇ ಪ್ರದೇಶ ಪ್ರಪಾತದಂತೆ ಬದಲಾಗಿತ್ತು.
ಇದೀಗ ಗ್ರಾಮಕ್ಕೆ ತಾತ್ಕಾಲಿಕವಾಗಿ ಸಂಪರ್ಕ ರಸ್ತೆಯನ್ನ ನಿರ್ಮಾಣ ಮಾಡಲಾಗಿದೆ. ರಸ್ತೆಯಿಲ್ಲದೇ ಭೂಕುಸಿತವನ್ನ ನೋಡಿರದ ಜನರು ಇದೀಗ ಗ್ರಾಮದ ಭೂಕುಸಿತ ಪ್ರದೇಶವನ್ನು ನೋಡೋದಕ್ಕೆ ಅಂತಾನೇ ಮುಗಿ ಬೀಳುತ್ತಿದ್ದಾರೆ. ಭೂಕುಸಿತವಾದ ಸ್ಥಳದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದು, ಸೆಲ್ಫಿ ಸ್ಪಾಟ್ನಂತಾಗಿದೆ ಅಂತಾರೆ ನೋಡುಗರು.
ಇನ್ನು, ಕಳಚೆ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತ ಮತ್ತೆ ಸರಿಪಡಿಸಲಾಗದಷ್ಟು ಭೀಕರವಾಗಿದೆ. ಭೂಕುಸಿತದಿಂದ ಹಲವಾರು ಎಕರೆ ಪ್ರದೇಶದ ಅಡಿಕೆ ತೋಟ ಕೊಚ್ಚಿಕೊಂಡು ಹೋಗಿದ್ದು, ನೂರಾರು ಮನೆಗಳಿಗೆ ಹಾನಿ ಉಂಟಾಗಿದೆ. ಗ್ರಾಮಕ್ಕೆ ಪ್ರಮುಖ ಸಂಪರ್ಕ ರಸ್ತೆಯಿದ್ದ ಪ್ರದೇಶವೇ ಕುಸಿತಕ್ಕೊಳಗಾಗಿದೆ.
ದಿನನಿತ್ಯದ ಕೆಲಸಗಳಿಗೆ ಯಲ್ಲಾಪುರ ಪಟ್ಟಣವನ್ನ ಅವಲಂಬಿಸಿದ್ದ ಜನರು ಪರದಾಡುವಂತಾಗಿತ್ತು. ಆದರೆ, ಈ ಪ್ರದೇಶದಲ್ಲಿ ಮತ್ತೆ ಭೂಕುಸಿತ ಉಂಟಾಗುವ ಆತಂಕ ಇದೆ. ಸರ್ಕಾರ ಸೂಕ್ತ ಮೂಲಸೌಕರ್ಯಗಳಿರುವ ಸ್ಥಳಕ್ಕೆ ತಮ್ಮನ್ನು ಸ್ಥಳಾಂತರಿಸಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಮಳೆಯ ಅಬ್ಬರಕ್ಕೆ ಸಂಭವಿಸಿದ ಭೂಕುಸಿತದಿಂದ ಗ್ರಾಮದ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಭೂಕುಸಿತ ಪ್ರದೇಶ ಇದೀಗ ಪ್ರವಾಸಿ ತಾಣದಂತಾಗಿ ಮಾರ್ಪಟ್ಟಿದೆ. ಆದರೆ, ಭೂಕುಸಿತ ಪ್ರದೇಶದಲ್ಲಿ ಜನರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುತ್ತಿರುವುದು ಅಪಾಯಕಾರಿ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಮುಂಜಾಗ್ರತೆ ಕೈಗೊಳ್ಳಬೇಕಿದೆ.