ಕಾರವಾರ:ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ 3 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಇನ್ನುಳಿದ ಮೂರು ಕ್ಷೇತ್ರದಲ್ಲಿ ಬಹುಸಂಖ್ಯಾತ ನಾಮಧಾರಿ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಈಡಿಗ ಮಹಾಸಭಾದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಒತ್ತಾಯಿಸುತ್ತಿದ್ದಾರೆ. ಇದೇ ವೇಳೆ ಆರ್.ವಿ.ದೇಶವಾಂಡೆ ವಿರುದ್ಧ ಆಕ್ರೋಶ ಹೊರ ಹಾಕಿದರು.
ಈ ಕುರಿತು ಮಾತನಾಡಿರುವ ಸ್ವಾಮೀಜಿ, ಉತ್ತರ ಕನ್ನಡದಲ್ಲಿ ನಾಮಧಾರಿ ಸಮುದಾಯ 5 ರಿಂದ 6 ಲಕ್ಷ ಜನಸಂಖ್ಯೆ ಹೊಂದಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಅಂದರೆ, 80 ರಿಂದ ಒಂದು ಲಕ್ಷ ಮತದಾರರನ್ನು ಹೊಂದಿದ್ದರೂ ಈ ಯಾವ ಕ್ಷೇತ್ರದಲ್ಲಿಯೂ ನಾಮಧಾರಿ ಸಮುದಾಯಕ್ಕೆ ಟಿಕೆಟ್ ಘೋಷಿಸಿಲ್ಲ ಎಂದರು.
'ನಾಮಧಾರಿ ಸಮಾಜ ಮುಗಿಸು ಯತ್ನ': ಶಿರಸಿ, ಸಿದ್ದಾಪುರ, ಕುಮಟಾ, ಹೊನ್ನಾವರ, ಭಟ್ಕಳ ಕ್ಷೇತ್ರಗಳಲ್ಲಿ ಆರ್.ವಿ.ದೇಶಪಾಂಡೆ ಅವರು ಕಾಂಗ್ರೆಸ್ ಟಿಕೆಟ್ಗೆ ಮೇಲಿನ ವರ್ಗದವರನ್ನು ಆಯ್ಕೆ ಮಾಡಿ ಕಳಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಇದನ್ನು ತೀವ್ರವಾಗಿ ಖಂಡಿಸುತ್ತಿದ್ದೇನೆ. ನಾಮಧಾರಿ ಸಮಾಜವನ್ನು ಮುಗಿಸು ಯತ್ನ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರ್.ವಿ.ದೇಶಪಾಂಡೆಯವರ ನಡೆಯನ್ನು ಇಡೀ ನಾಮಧಾರಿ ಸಮುದಾಯ ಅಷ್ಟೇ ಅಲ್ಲ ಈಡಿಗ, ಬಿಲ್ಲವ ಸಮುದಾಯವೂ ಖಂಡಿಸುತ್ತಿದೆ. ಒಂದು ವೇಳೆ ಅಲ್ಲಿನ ನಾಮಧಾರಿಗಳಿಗೆ ಅನ್ಯಾಯವಾದರೇ ಮಂಗಳೂರಿನ ಬಿಲ್ಲವರು, ಶಿವಮೊಗ್ಗದ ದಿವರು ಮತ್ತು ರಾಜ್ಯಾದ್ಯಂತ ಇರುವ ಈಡಿಗರು ಅವರ ಜೊತೆ ನಿಂತುಕೊಂಡು ಪ್ರತಿಭಟನೆಗೆ ಇಳಿಯಬೇಕಾಗುತ್ತದೆ. ಕಾಂಗ್ರೆಸ್ ಬಹಳ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.