ಕರ್ನಾಟಕ

karnataka

ETV Bharat / state

ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ನಿರ್ಲಕ್ಷ್ಯ: ಪರದಾಡಿದ ಕುಟುಂಬ..

ಕೊನೆಗೆ ಮಾಜಿ ಸಚಿವ ಆರ್. ವಿ ದೇಶಪಾಂಡೆ ಅವರಿಗೆ ವಿಷಯ ತಿಳಿಸಿದ ಬಳಿಕ ವೈದ್ಯರು ಸಂಜೆ ವೇಳೆ ಪೋಸ್ಟ್‌ ಮಾರ್ಟಂ ನಡೆಸಲು ಮುಂದಾಗಿದ್ದಾರೆ. ಆಸ್ಪತ್ರೆಯ ಅವ್ಯವಸ್ಥೆ ಕುರಿತು ಮೃತನ ಕಡೆಯವರು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಪರಿಸ್ಥಿತಿ ಇನ್ಯಾರಿಗೂ ಆಗದಂತೆ ಸಂಬಂಧಪಟ್ಟವರು ಎಚ್ಚರಿಕೆವಹಿಸುವಂತೆ ಮನವಿ ಮಾಡಿದ್ದಾರೆ..

Santosh Gawndekar
ಸಂತೋಷ್ ಗಾಂವ್ಡೇಕರ್

By

Published : Jan 21, 2022, 4:18 PM IST

Updated : Jan 22, 2022, 12:53 AM IST

ಕಾರವಾರ :ಉತ್ತರಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ 24 ತಾಸಾಗಿದ್ರೂ ಮರಣೋತ್ತರ ಪರೀಕ್ಷೆ ಮಾಡದೆ ಕುಟುಂಬಸ್ಥರಿಗೆ ಮೃತದೇಹವನ್ನೂ ನೀಡದೆ ಸತಾಯಿಸಿದ ಘಟನೆ ನಡೆದಿದೆ.

ಜೋಯಿಡಾ ತಾಲೂಕಿನ ಕುಂಬಾರವಾಡ ನಿವಾಸಿಯಾಗಿರುವ ಸಂತೋಷ್ ಗಾಂವ್ಡೇಕರ್(24) ಎಂಬುವರು, ಗೋವಾದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ‌‌ ನಡೆಸುತ್ತಿದ್ದರು. ಅದ್ಯಾವುದೋ ಕಾರಣಕ್ಕೆ ಮನನೊಂದ ಆತ ಜನವರಿ 16ರಂದು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ವೇಳೆ ಆತನ ಪರಿಚಯದವರು ಗೋವಾದ ಮಡಗಾಂವ್‌ನ ಆಸ್ಪತ್ರೆಗೆ ದಾಖಲಿಸಿ ಆತನನ್ನ ಅದು ಹೇಗೋ ಉಳಿಸಿದ್ದರು.

ಎರಡು ದಿನ ಆಸ್ಪತ್ರೆಯಲ್ಲಿದ್ದ ಸಂತೋಷ್ ಬಳಿಕ ಅಲ್ಲಿಂದ ಡಿಸ್ಚಾರ್ಜ್ ಆಗಿ ಬಸ್ ಮೂಲಕ ಕರ್ನಾಟಕ ಗಡಿಯವರೆಗೆ ಬಂದಿದ್ದ. ಅಲ್ಲಿಂದ ಮನೆಯವರು ಆತನನ್ನು ಕರೆದುಕೊಂಡು ಹಿಂತಿರುಗುತ್ತಿದ್ದಾಗ ಮತ್ತೆ ಜೋರಾಗಿ ಹೊಟ್ಟೆನೋವು ಕಾಣಿಸಿದ್ದರಿಂದ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ, ವಿಷದ ಪ್ರಭಾವದಿಂದ ಸಂತೋಷ್‌ಗೆ ಬಹು ಅಂಗಾಂಗ ವೈಫಲ್ಯ ಉಂಟಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ 6 ಗಂಟೆಗೆ ಮೃತಪಟ್ಟಿದ್ದಾನೆ. ಆದರೆ, ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಪರಿಣಾಮ ಮರಣೋತ್ತರ ಪರೀಕ್ಷೆ ನಡೆಸದೇ, ಮೃತದೇಹವನ್ನು ಕುಟುಂಬಸ್ಥರಿಗೆ ನೀಡುವ ಯಾವ ಪ್ರಕ್ರಿಯೆಯನ್ನೂ ನಡೆಸದೇ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯತೆ ತೋರಿದೆ.

ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ನಿರ್ಲಕ್ಷ್ಯ

ಸಂತೋಷ್ ಮೃತಪಟ್ಟ ಒಂದು ಗಂಟೆಯ ಬಳಿಕ ಕಾರವಾರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪೋಸ್ಟ್​ಮಾರ್ಟಂ ಮಾಡಿದ್ದಾರೆ. ನಂತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಬಹುದು ಎಂದು ತಿಳಿಸಿದ್ದರು. ಆದರೆ, ಈ ಬಗ್ಗೆ ಕುಟುಂಬಸ್ಥರಿಗೆ ಸರಿಯಾದ ಮಾಹಿತಿ ನೀಡದ್ದರಿಂದ ತಡರಾತ್ರಿಯವರೆಗೆ ಅವರು ಕಾದು ಕುಳಿತುಕೊಳ್ಳುವಂತಾಯಿತು. ಮೃತನ ಕುಟುಂಬಸ್ಥರು ಬಡವರಾಗಿದ್ದು, ಲಾಡ್ಜ್‌ನಲ್ಲಿ ಉಳಿದುಕೊಳ್ಳಲು ಹಣವಿಲ್ಲದೆ ರಸ್ತೆ ಬದಿಯ ಕಟ್ಟೆಯಲ್ಲೇ ರಾತ್ರಿ ಕಳೆದಿದ್ದಾರೆ.

ಮರುದಿನ ಬೆಳಗ್ಗೆಯಾದರೂ ಮೃತದೇಹ ಸಿಗಬಹುದು ಎಂದು ಕುಟುಂಬಸ್ಥರು ಕಾದುಕುಳಿತಿದ್ದರಾದರೂ, ಪೋಸ್ಟ್‌ಮಾರ್ಟಂ ನಡೆಸುವ ವೈದ್ಯರಿಲ್ಲದೇ ಸಂಜೆಯಾದ್ರೂ ಮೃತದೇಹ ಹಸ್ತಾಂತರವಾಗಿಲ್ಲ.‌ ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಹಾಗೂ ಇತರೆ ವೈದ್ಯರಿಗೆ ಕೇಳಿದರೂ ಸಮರ್ಪಕ ಉತ್ತರ ಸಿಗದೇ ಕುಟುಂಬಸ್ಥರು ಹೈರಾಣಾಗಿದ್ದಾರೆ.

ಕೊನೆಗೆ ಮಾಜಿ ಸಚಿವ ಆರ್. ವಿ ದೇಶಪಾಂಡೆ ಅವರಿಗೆ ವಿಷಯ ತಿಳಿಸಿದ ಬಳಿಕ ವೈದ್ಯರು ಸಂಜೆ ವೇಳೆ ಪೋಸ್ಟ್‌ ಮಾರ್ಟಂ ನಡೆಸಲು ಮುಂದಾಗಿದ್ದಾರೆ. ಆಸ್ಪತ್ರೆಯ ಅವ್ಯವಸ್ಥೆ ಕುರಿತು ಮೃತನ ಕಡೆಯವರು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಪರಿಸ್ಥಿತಿ ಇನ್ಯಾರಿಗೂ ಆಗದಂತೆ ಸಂಬಂಧಪಟ್ಟವರು ಎಚ್ಚರಿಕೆವಹಿಸುವಂತೆ ಮನವಿ ಮಾಡಿದ್ದಾರೆ.

ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದ ಕುರಿತು ಈ ಹಿಂದಿನಿಂದಲೂ ಆರೋಪಗಳು ಕೇಳಿ ಬರುತ್ತಿವೆ. ಈ ಬಗ್ಗೆ ಮತ್ತೊಮ್ಮೆ ಇದು ಸಾಬೀತಾದಂತಾಗಿದೆ. ಇನ್ನಾದ್ರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಎಚ್ಚೆತ್ತು ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಿದೆ ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಓದಿ:ಹನಿಟ್ರ್ಯಾಪ್ ಬಲಿಯಾಗಿ 49 ಲಕ್ಷ ರೂ. ಕಳೆದುಕೊಂಡ ಜ್ಯೋತಿಷಿ : ಯುವತಿ ಸೇರಿ ಇಬ್ಬರು ಅರೆಸ್ಟ್​

Last Updated : Jan 22, 2022, 12:53 AM IST

For All Latest Updates

TAGGED:

ABOUT THE AUTHOR

...view details