ಕಾರವಾರ: ಅಬಕಾರಿ ಚೆಕ್ ಪೋಸ್ಟ್ ದಾಟಿ ಗೋವಾದಿಂದ ಹೈದರಾಬಾದ್ಗೆ ಅಕ್ರಮವಾಗಿ ಸಾಗಿಸುತ್ತಿದ್ದ ₹ 32.06 ಲಕ್ಷ ಮೌಲ್ಯದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಜೋಯಿಡಾ ತಾಲೂಕಿನ ರಾಮನಗರದಲ್ಲಿ ನಡೆದಿದೆ. ಮದ್ಯ ತುಂಬಿದ ಲಾರಿ ಗೋವಾದಿಂದ ಜೋಯಿಡಾ ಬಳಿ ಚೆಕ್ ಪೋಸ್ಟ್ ದಾಟಿ ಹೈದರಾಬಾದ್ ಕಡೆ ತೆರಳುತ್ತಿತ್ತು. ಖಚಿತ ಮಾಹಿತಿ ಆಧರಿಸಿ ಬೆಳಗ್ಗೆ 6 ಗಂಟೆಗೆ ರಾಮನಗರ ಬಳಿ ತಡೆದ ಪೊಲೀಸರು ಊಹಿಸಿದಂತೆ ಭರ್ಜರಿ ಕಾರ್ಯಾಚರಣೆ ನಡೆಸಿದರು.
ಈ ವೇಳೆ, ಸರಕು ಸಾಗಣೆ ಲಾರಿಯಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣ ತೆಲಂಗಾಣ ಮೂಲದ ಲಾರಿ ಚಾಲಕ ಕೊತ್ತಪಲ್ಲಿ ನಾಗಾಚಾರಿಯನ್ನ ಪೊಲೀಸರು ಬಂಧಿಸಿದ್ದಾರೆ. ಲಾರಿಯೂ ಅಬಕಾರಿ ಚೆಕ್‌ಪೋಸ್ಟ್ ಸುಲಭದಲ್ಲಿ ದಾಟಿ ಮುಂದೆ ಸಾಗುವಾಗ ರಾಮನಗರ ಪೊಲೀಸರಿಗೆ ಸಿಕ್ಕಿಬಿದ್ದಿದೆ. ಕಾರ್ಯಾಚರಣೆಯನ್ನು ಸಿಪಿಐ ನಿತ್ಯಾನಂದ ಪಂಡಿತ್, ಪೊಲೀಸರಾದ ಸಂಜಯ್, ಮಂಜುನಾಥ ಹಾಗೂ ದರ್ಶನ್ ತಂಡ ನಡೆಸಿದೆ.
ಸುಮಾರು 2 ಲಕ್ಷ ರೂ. ಮೌಲ್ಯದ ಪಾರ್ಲೆಜಿ ಬಿಸ್ಕಿಟ್ ಜೊತೆ ಅಕ್ರಮ ಮದ್ಯ ಸಾಗಾಟ ಮಾಡಲಾಗುತಿತ್ತು. ಬಿಸ್ಕಿಟ್ ಜೊತೆ 750 ಎಂಎಲ್‌ನ 24 ಬಾಟಲ್‌ಗಳಂತೆ 10 ಬಾಕ್ಸ್‌ಗಳಲ್ಲಿ 240 ಬಾಟಲ್ ರಾಯಲ್ ಸ್ಟ್ಯಾಗ್ ವಿಸ್ಕಿ ಹಾಗೂ 750 ಎಂಲ್‌ನ 24 ಬಾಟಲ್‌ಗಳಂತೆ 130 ಬಾಕ್ಸ್‌ಗಳಲ್ಲಿ 3120 ಮ್ಯಾನ್ಶನ್ ಹೌಸ್ ಫ್ರೆಂಚ್ ಬ್ರಾಂಡಿ ಬಾಟಲ್ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇವುಗಳ ಒಟ್ಟಾರೆ ಮೌಲ್ಯ 32,06,400 ರೂ. ಆಗಿದೆ. 2520 ಲೀಟರ್ ಗೋವಾ ಮದ್ಯ ಜಪ್ತಿ ಮಾಡಲಾಗಿದೆ. ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.