ಭಟ್ಕಳ(ಉತ್ತರ ಕನ್ನಡ):ಭಾರತದ ಪೌರತ್ವದ ಇಲ್ಲದೆ ಅಕ್ರಮವಾಗಿ ಭಟ್ಕಳದಲ್ಲಿ ವಾಸವಾಗಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಇತ್ತೀಚೆಗೆ ಪತ್ತೆ ಹಚ್ಚಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಮಹಿಳೆಗೆ ನಕಲಿ ದಾಖಲೆಗಳನ್ನು ಮಾಡಿಕೊಟ್ಟವರ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.
ಭಟ್ಕಳದ ನವಾಯತ್ ಕಾಲೋನಿಯಲ್ಲಿ 2015 ರಿಂದ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಖತೀಜಾ ಮೆಹರಿನ್ ( 32 ವರ್ಷ) ಅನ್ನು ಪೊಲೀಸರು ಜೂನ್ 9 ರಂದು ಬಂಧಿಸಿದ್ದರು. ಪಾಕಿಸ್ತಾನದ ಪೌರತ್ವ ಹೊಂದಿದ್ದ ಈಕೆ, ಕಳ್ಳ ಮಾರ್ಗದ ಮೂಲಕ ಭಟ್ಕಳಕ್ಕೆ ಆಗಮಿಸಿ ವಾಸವಾಗಿದ್ದಳು ಎನ್ನಲಾಗ್ತಿದೆ.
ನವಾಯತ್ ಕಾಲೋನಿಯ ಜಾವೀದ್ ಮೊಹಿದ್ದೀನ್ ಎಂಬಾತನನ್ನು ದುಬೈನಲ್ಲಿ ವಿವಾಹವಾಗಿದ್ದ ಈಕೆ, 2014ರಲ್ಲಿ 3 ತಿಂಗಳು ವಿಸಿಟಿಂಗ್ ವೀಸಾದ ಮೇಲೆ ಭಾರತಕ್ಕೆ ಬಂದು ಹಿಂತಿರುಗಿದ್ದಳು. ಪುನಃ 2016ರ ಆರಂಭದಲ್ಲಿ ಕಳ್ಳ ಮಾರ್ಗವಾಗಿ ಭಾರತಕ್ಕೆ ನುಸುಳಿ ಬಂದು ತನ್ನ ಗಂಡನ ಮನೆಯಾದ ನವಾಯತ್ ಕಾಲೋನಿಯಲ್ಲಿ ವಾಸವಾಗಿದ್ದಳು ಎಂದು ತಿಳಿದು ಬಂದಿದೆ.
ಈಕೆ ಸುಳ್ಳು ದಾಖಲೆಗಳನ್ನು ನೀಡಿ ಸ್ಥಳೀಯ ಸಂಸ್ಥೆಗಳಿಂದ ರೇಷನ್ ಕಾರ್ಡ್, ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯನ್ನು ಪಡೆದುಕೊಂಡಿದ್ದಳು ಎಂಬುದು ಪೊಲೀಸ್ ದಾಳಿಯ ವೇಳೆ ತಿಳಿದು ಬಂದಿತ್ತು. ನಕಲಿ ದಾಖಲೆಗಳ ಸಮೇತ ಮಹಿಳೆಯನ್ನು ವಶಕ್ಕೆ ಪಡೆದಿದ್ದ ಪೊಲೀಸರು, ವಿದೇಶಿ ಕಾಯ್ದೆ ಉಲ್ಲಂಘನೆ ಮತ್ತು ಇತರೆ ಐಪಿಸಿ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೂ ಹಾಜರುಪಡಿಸಿದ್ದರು. ಸದ್ಯ, ಮಹಿಳೆ ನ್ಯಾಯಾಂಗ ಬಂಧನದಲ್ಲಿ ಇದ್ದಾಳೆ.
ಮೂರು ದಾಖಲೆಗೆ ಮೂರು ವಿಳಾಸ!
ಪ್ರಕರಣದಲ್ಲಿ, ಭಾರತದ ಪೌರತ್ವ ಪಡೆಯದಿದ್ದರೂ ಮಹಿಳೆ ಹೇಗೆ ಪ್ರಮುಖ ದಾಖಲೆಗಳನ್ನು ಪಡೆದುಕೊಂಡಳು ಎಂಬ ಬಗ್ಗೆ ತನಿಖೆಗೆ ಇಳಿದ ಪೊಲೀಸರಿಗೆ ಸಾಕಷ್ಟು ಅಚ್ಚರಿದಾಯಕ ಸಂಗತಿಗಳು ಗೊತ್ತಾಗಿವೆ. ಮಹಿಳೆ ಬಳಿ ಇದ್ದ ಆಧಾರ್ ಕಾರ್ಡ್ನಲ್ಲಿ ಭಟ್ಕಳದ ವಿಳಾಸವಿದ್ದರೆ, ಚುನಾವಣಾ ಗುರುತಿನ ಚೀಟಿಯಲ್ಲಿ ಹೈದರಾಬಾದ್ನ ವಿಳಾಸದವಿದೆ. ರೇಷನ್ ಕಾರ್ಡ್ನಲ್ಲಿ ಬೆಂಗಳೂರಿನ ವಿಳಾಸ ಇರೋದು ಪೊಲೀಸರಿಗೆ ದಿಗಿಲು ಬಡಿಸಿದೆ.