ಭಟ್ಕಳ (ಉ.ಕ): ಅಪ್ರಾಪ್ತೆಯೋರ್ವಳನ್ನು ಪುಸಲಾಯಿಸಿ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವ್ಯಕ್ತಿಯೋರ್ವನನ್ನು ಮುರ್ಡೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯಪುರದ ವೀರಭದ್ರೇಶ್ವರ ನಗರ ನಿವಾಸಿ ಶಶಿಕುಮಾರ್ ಮೇತ್ರಿ ಬಂಧಿತ ಆರೋಪಿಯಾಗಿದ್ದಾನೆ.
ಸಾಮಾಜಿಕ ಜಾಲತಾಣವೊಂದರಲ್ಲಿ ಬಾಲಕಿಯ ಪರಿಚಯ ಮಾಡಿಕೊಂಡಿದ್ದ ಶಶಿಕುಮಾರ್ ಬಾಲಕಿಯ ಸ್ನೇಹ ಸಂಪಾದಿಸಿದ್ದ. ನಂತರ ಬಾಲಕಿಯನ್ನು ಪುಸಲಾಯಿಸಿ ಮುರ್ಡೇಶ್ವರದಿಂದ ಅಪಹರಣ ಮಾಡಿದ್ದ. ತನ್ನ ಮಾವನ ಮನೆಗೆ ಕರೆದೊಯ್ದು ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ನೊಂದ ಬಾಲಕಿ ಫೆ.3ರಂದು ಖುದ್ದಾಗಿ ಠಾಣೆಗೆ ಬಂದು ಆರೋಪಿ ಶಶಿಕುಮಾರ್ ಮೇತ್ರಿ ವಿರುದ್ಧ ದೂರು ನೀಡಿದ್ದಳು. ತನ್ನನ್ನು ಬಲವಂತವಾಗಿ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಳು.