ಕಾರವಾರ: ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸರನ್ನು ಸ್ಮರಿಸುವ ಉದ್ದೇಶದಿಂದ ಆಚರಿಸಲಾಗುವ ರಾಷ್ಟ್ರೀಯ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಇಂದು ಕಾರವಾರ ಪೊಲೀಸ್ ಪರೇಡ್ ಮೈದಾನದ ಬಳಿ ಆಚರಿಸಲಾಯಿತು.
ಕಾರವಾರದಲ್ಲಿ ಹುತಾತ್ಮ ಪೊಲೀಸರ ಸ್ಮರಣೆ...ಆರಕ್ಷಕರ ಪುತ್ಥಳಿಗೆ ವಿಶೇಷ ಗೌರವ
ರಾಷ್ಟ್ರೀಯ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಇಂದು ಕಾರವಾರದಲ್ಲಿ ಆಚರಣೆ ಮಾಡಲಾಯ್ತು. ಈ ವೇಳೆ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ವಿಪುಲಾ ಎಂ.ಬಿ.ಪೂಜಾರಿ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕುಟುಂಬವನ್ನ ಬಿಟ್ಟು ಕೆಲಸ ಮಾಡಿದ್ದಾರೆ. ಅಂಥವರ ತ್ಯಾಗವನ್ನ ನಾವು ನೆನಪಿಟ್ಟುಕೊಳ್ಳಬೇಕಾಗಿದೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ವಿಪುಲಾ ಎಂ.ಬಿ.ಪೂಜಾರಿ ಹುತಾತ್ಮ ಪೊಲೀಸರ ಪುತ್ಥಳಿಗೆ ಹೂಗುಚ್ಛ ಸಮರ್ಪಿಸಿ ನಮನ ಸಲ್ಲಿಸಿದರು. ದೇಶದ ನಾನಾ ರಾಜ್ಯಗಳಲ್ಲಿ ಕರ್ತವ್ಯದಲ್ಲಿರುವಾಗ ಅಗಲಿದ ಪೊಲೀಸರಿಗೆ ಈ ವೇಳೆ ನಮನ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ, ಜಿಲ್ಲಾ ಪಂಚಾಯತ್ ಸಿಇಓ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಸೇರಿ ಇನ್ನಿತರರು ಉಪಸ್ಥಿತರಿದ್ದರು.
ಡಿಎಆರ್ ಪೊಲೀಸ್ ಸಿಬ್ಬಂದಿ ಕವಾಯತು ನಡೆಸುವುದರ ಮೂಲಕ ಮೃತರಿಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಪುಲ ಪೂಜಾರಿ, ಸಮಾಜದಲ್ಲಿ ಹೆಚ್ಚಾಗುತ್ತಿರುವ ಅಪರಾಧ, ಸಂಘರ್ಷ ತಡೆಯುವಲ್ಲಿ ಪೊಲೀಸರ ಪಾತ್ರ ಬಹಳ ಮುಖ್ಯವಾಗಿದೆ. ಕೊರೊನಾ ಮಹಾಮಾರಿಯಿಂದ ಇಡೀ ದೇಶವೇ ತತ್ತರಿಸಿದೆ. ಉತ್ತರಕನ್ನಡ ಜಿಲ್ಲೆಯ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅತ್ಯಂತ ಮುತುವರ್ಜಿಯಿಂದ ಕೆಲಸ ಮಾಡಿದೆ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕುಟುಂಬವನ್ನ ಬಿಟ್ಟು ಕೆಲಸ ಮಾಡಿದ್ದಾರೆ. ಅಂಥವರ ತ್ಯಾಗವನ್ನ ನಾವು ನೆನಪಿಟ್ಟುಕೊಳ್ಳಬೇಕಾಗಿದೆ ಎಂದು ಹೇಳಿದರು.