ನೌಕಾನೆಲೆ ಜಾಗದಲ್ಲಿ ಬಿಜೆಪಿ ಕಾರ್ಯಕ್ರಮ- ಕಾಂಗ್ರೆಸ್ ಆಕ್ಷೇಪ. ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಕಣ ರಂಗೇರಿದೆ. ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುವ ಕಾರ್ಯಕ್ರಮ ನಿಗದಿಯಾಗಿದೆ ಎನ್ನಲಾಗಿದೆ. ಆದರೆ ಮೋದಿ ಕಾರ್ಯಕ್ರಮ ಮಾಡಲು ನಿರ್ಧರಿಸಿರುವ ಸ್ಥಳ ಇದೀಗ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಅಸ್ತ್ರವಾಗಿದೆ. ಕಾರ್ಯಕ್ರಮ ರದ್ದು ಮಾಡುವ ಯತ್ನಕ್ಕೆ ಕಾಂಗ್ರೆಸ್ ಮುಂದಾಗಿದೆ.
ಹೌದು. ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರಲೇ ಬೇಕು ಎಂದು ಅಬ್ಬರದ ಪ್ರಚಾರಕ್ಕೆ ಇಳಿದಿವೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಹಲವೆಡೆ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಮುಂದಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೂ ಪ್ರಧಾನಿ ಆಗಮಿಸಲು ಒಪ್ಪಿದ್ದು, ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದಲ್ಲಿ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದಾರೆ. ಹಟ್ಟಿಕೇರಿ ಗ್ರಾಮದ ಬಳಿ ಕದಂಬ ನೌಕಾನೆಲೆ ವಶಪಡಿಸಿಕೊಂಡ ಜಾಗವನ್ನ ಮೋದಿ ಕಾರ್ಯಕ್ರಮ ಮಾಡಲು ಬಿಜೆಪಿ ನಿರ್ಧರಿಸಿದೆ. ಈಗಾಗಲೇ ನೌಕಾನೆಲೆಗೆ ಅನುಮತಿ ಸಹ ಕೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
"ನೌಕಾನೆಲೆಯ ಜಾಗದಲ್ಲಿ ಚುನಾವಣಾ ಪ್ರಚಾರ ಮಾಡಿದರೆ ನೀತಿ ಸಂಹಿತಿ ಉಲ್ಲಂಘನೆ ಆಗಲಿದೆ. ಅಲ್ಲದೇ ಭದ್ರತೆಗೂ ಧಕ್ಕೆ ಬರಲಿದೆ. ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ಒಂದೊಮ್ಮೆ ಅವಕಾಶ ಮಾಡಿಕೊಟ್ಟರೇ ನ್ಯಾಯಾಲಯದ ಮೆಟ್ಟಿಲೇರುತ್ತೇವೆ"- ಬಿ.ಕೆ ಹರಿಪ್ರಸಾದ್ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ.
ಪ್ರಧಾನಿ ನರೇಂದ್ರ ಮೋದಿ ಏ.1 ಅಥವಾ 3ನೇ ತಾರೀಕು ಜಿಲ್ಲೆಗೆ ಬರಲಿದ್ದಾರೆ ಎನ್ನಲಾಗಿದೆ. ಕಾರವಾರ ಕ್ಷೇತ್ರಕ್ಕೆ ಚುನಾವಣಾ ಪ್ರಚಾರಕ್ಕೆ ಬರಲು ಒಪ್ಪಿಗೆ ಕೊಟ್ಟಿದ್ದು ಮೋದಿ ಕಾರ್ಯಕ್ರಮಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ. ಆದರೆ ಕಾರವಾರ ಹಾಗೂ ಅಂಕೋಲಾ ತಾಲೂಕಿನಲ್ಲಿ ದೊಡ್ಡ ಜಾಗ ಎಲ್ಲೂ ಇಲ್ಲ. ಹಾಗಾಗಿ ಹಟ್ಟಿಕೇರಿ ಗ್ರಾಮದ ನೌಕಾನೆಲೆಯ ವ್ಯಾಪ್ತಿಯ ಜಾಗವನ್ನ ಕೇಳಿದ್ದಾರೆ ಎಂದು ತಿಳಿದು ಬಂದಿದೆ.
ನೌಕಾನೆಲೆಯ ಜಾಗದಲ್ಲಿ ಜನರು ಒಡಾಡುವುದಕ್ಕೆ ಬಿಡುವುದಿಲ್ಲ. ಇನ್ನು ರಾಜಕೀಯ ಕಾರ್ಯಕ್ರಮಕ್ಕೆ ಹೇಗೆ ಅವಕಾಶ ಕೊಡುತ್ತಾರೆ ಎನ್ನುವ ಪ್ರಶ್ನೆ ಕಾಂಗ್ರೆಸ್ನದ್ದು. ಆದರೆ ಇದಕ್ಕೆ ಬಿಜೆಪಿ ನಾಯಕರು ಹೇಳುವುದೇ ಬೇರೆ. "ಅನುಮತಿ ಪಡೆದು ಕಾರ್ಯಕ್ರಮ ಮಾಡಲಾಗುವುದು. ನೌಕಾನೆಲೆಗೆ ಜಮೀನು ನೀಡಿದವರು ನಾವು. ಬಿ.ಕೆ ಹರಿಪ್ರಸಾದ್ ಅವರಿಗೆ ಈ ಜಿಲ್ಲೆಯ ಇತಿಹಾಸ ಗೊತ್ತಿಲ್ಲ"-ನಾಗರಾಜ ನಾಯಕ ಜಿಲ್ಲಾ ಬಿಜೆಪಿ ವಕ್ತಾರ.
ಸದ್ಯ ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವರನ್ನ ಜಿಲ್ಲೆಗೆ ಕರೆಸಲು, ಜತೆಗೆ ಹೆಚ್ಚಿನ ಜನರನ್ನ ಸೇರಿಸಲು ಪ್ರಯತ್ನಕ್ಕೆ ಇಳಿದರೆ ಇತ್ತ ಕಾಂಗ್ರೆಸ್ ಮಾತ್ರ ಹೇಗಾದರೂ ಮಾಡಿ ಕಾರ್ಯಕ್ರಮ ರದ್ದು ಮಾಡಬೇಕು. ಬೇರೆ ಸ್ಥಳದಲ್ಲಿ ಬೇಕಾದರೆ ಮಾಡಲಿ ಎಂಬ ಜಿದ್ದಿಗೆ ಇಳಿದಿದೆ. ಒಟ್ಟಿನಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆ ರಂಗೇರಿದೆ. ನೌಕಾನೆಲೆ ವ್ಯಾಪ್ತಿಯ ಜಾಗದಲ್ಲಿ ಮೋದಿ ಕಾರ್ಯಕ್ರಮ ನಡೆಯುತ್ತದೆಯೋ ಇಲ್ಲವೋ ಎಂಬುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ಶಿಡ್ಲಘಟ್ಟ, ಹೊಸಕೋಟೆಯಲ್ಲಿ ಜೆ.ಪಿ ನಡ್ಡಾ ಮೆಗಾ ರೋಡ್ ಶೋ.. ಅಭ್ಯರ್ಥಿಗಳ ಪರ ಮತಬೇಟೆ