ಕಾರವಾರ:ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಪೈಪೋಟಿಯ ಗೆಲುವು ದಾಖಲಿಸಿದ್ದ ಶಾಸಕ ಸತೀಶ್ ಸೈಲ್ ಭಾನುವಾರ ನಗರದಲ್ಲಿ ಅದ್ಧೂರಿ ವಿಜಯೋತ್ಸವ ಆಚರಿಸಿದರು.
ನಗರದ ಕೋಡಿಬೀರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಸತೀಶ್ ಸೈಲ್ ಅವರನ್ನು ಅಭಿಮಾನಿಗಳು ಹೂವಿನ ಹಾರ ಹಾಕಿ ಅಭಿನಂದಿಸಿದರು. ಬಳಿಕ ಪತ್ನಿ ಇಬ್ಬರು ಪುತ್ರಿಯರು ಒಡಗೂಡಿ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ತೆರೆದ ವಾಹನದ ಮೂಲಕ ಬಸ್ ನಿಲ್ದಾಣ, ಸುಭಾಶ್ ವೃತ್ತ, ಸವಿತಾ ವೃತ್ತದ ಮೂಲಕ ಕೋಡಿಬಾಗದವರೆಗೆ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿದರು. ಇದೇ ವೇಳೆ ಅಭಿಮಾನಿಗಳು ನಗರದ ಸುಭಾಸ್ ಸರ್ಕಲ್ ಬಳಿ ಪಟಾಕಿ ಸಿಡಿಸಿ ಬೃಹತ್ ಗುಲಾಬಿ ಮಾಲೆಯನ್ನು ಕ್ರೇನ್ ಮೂಲಕ ಹಾಕಿ ಅಭಿನಂದಿಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಸತೀಶ್ ಸೈಲ್, ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ಧನಾಗಿದ್ದೇನೆ. ನನ್ನನ್ನು ಕಾಯಂ ಮಾಜಿಯಾಗಿ ಮಾಡುವುದಾಗಿ ಟೀಕಿಸಿದವರನ್ನು ಇದೀಗ ದೇವರೇ ಮಾಜಿ ಮಾಡಿದ್ದಾನೆ ಎಂದು ಬಿಜೆಪಿ ಅಭ್ಯರ್ಥಿಗೆ ಟಾಂಗ್ ಕೊಟ್ಟರು.
ಕ್ಷೇತ್ರದಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರನ್ನು ಕರೆಯಿಸಿದ್ದರು. ಆದರೆ ಜನರು ಕಾಂಗ್ರೆಸ್ ಪರವಾಗಿದ್ದು, ಅದನ್ನು ಬದಲಿಸಲು ಯಾರಿದಂದಲೂ ಸಾಧ್ಯವಾಗಿಲ್ಲ. ಕಾಂಗ್ರೆಸ್‌ನ ಗ್ಯಾರೆಂಟಿ ಕಾರ್ಡ್ ಹಾಗೂ ಪ್ರಣಾಳಿಕೆಗಳನ್ನ ಜನರು ಒಪ್ಪಿಕೊಂಡಿದ್ದು, ಕೊಟ್ಟ ಮಾತನ್ನು ಕಾಂಗ್ರೆಸ್ ಉಳಿಸಿಕೊಳ್ಳಲಿದೆ. ಕ್ಷೇತ್ರದ ಮತದಾರ ಆಶೀರ್ವಾದದಿಂದ ಧನ್ಯನಾಗಿದ್ದು, ಜನರ ಕೆಲಸವನ್ನು ಸದಾಕಾಲ ಮಾಡುವ ಭರವಸೆ ನೀಡುತ್ತೇನೆ ಎಂದು ಹೇಳಿದರು.