ಕಾರವಾರ: ಸರ್ಕಾರಿ ಕಚೇರಿಗೆ ಆಗಮಿಸಿದ ಇಬ್ಬರು ವ್ಯಕ್ತಿಗಳು ಹಳೆ ವಿಷಯವನ್ನು ಪ್ರಸ್ತಾಪಿಸಿ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆದಾಡಿಕೊಂಡಿರುವ ಘಟನೆ ಹೊನ್ನಾವರ ಪಟ್ಟಣ ಪಂಚಾಯತ್ ಆವರಣದಲ್ಲಿ ನಡೆದಿದೆ.
ಹೊನ್ನಾವರ: ವೈಯಕ್ತಿಕ ಜಗಳ, ಸರ್ಕಾರಿ ಕಚೇರಿಯಲ್ಲಿ ಮಾರಾಮಾರಿ ಪಟ್ಟಣದ ರಾಮತೀರ್ಥ ನಿವಾಸಿ ಕುಮಟಾ ಪುರಸಭೆ ನಿವೃತ್ತ ನೌಕರ ಮಹೇಶ್ ಬಹಿರಾಮ ಪಾಲೇಕರ್ ಹಾಗೂ ಚಹಾ ಅಂಗಡಿ ವ್ಯಾಪಾರಸ್ಥ, ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಉದಯರಾಜ ಗಣಪತಿ ಮೇಸ್ತ ಹೊಡೆದಾಡಿಕೊಂಡವರು. ಪಾಲೇಕರ್ ಪಪಂ ಹೊನ್ನಾವರ ಮುಖ್ಯಾಧಿಕಾರಿಗಳ ಕಚೇರಿಗೆ ತಮ್ಮ ಕಾಗದ ಪತ್ರ ಪಡೆದುಕೊಳ್ಳಲು ಬಂದ ವೇಳೆ ಗಣಪತಿ ಮೇಸ್ತ ಆಗಮಿಸಿದ್ದರು.
ಈ ವೇಳೆ ಗಣಪತಿ ಮೇಸ್ತ ಹಿಂದೆ ನಡೆದ ವಿಷಯವೊಂದನ್ನು ಪ್ರಸ್ತಾಪಿಸಿದ್ದು, ಲಂಚ ಪಡೆದ ವಿಚಾರವಾಗಿ ನಿವೃತ್ತ ನೌಕರ ಮಹೇಶ್ ವಿರುದ್ಧ ಆರೋಪಿಸಿದಾಗ ಜಗಳ ಪ್ರಾರಂಭವಾಗಿ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ಈ ವೇಳೆ ವಾದ-ವಿವಾದ ವಿಕೋಪಕ್ಕೆ ತಿರುಗಿ ಇಬ್ಬರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಬಳಿಕ ಸ್ಥಳದಲ್ಲಿದ್ದ ಅಧಿಕಾರಿಗಳು ಜಗಳ ಬಿಡಿಸಿ ಹೊರಗೆ ತೆರಳುವಂತೆ ಸೂಚಿಸಿದ್ದಾರೆ.
ದೂರು ಪ್ರತಿದೂರು ದಾಖಲು:
ಇನ್ನು ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮಹೇಶ್ ಮತ್ತು ಉದಯರಾಜ ಇಬ್ಬರು ತಮ್ಮ ಮೇಲೆ ಹಲ್ಲೆ ನಡೆಸಿ ನೋವು ಪಡಿಸಿರುವುದಾಗಿ ದೂರು ಪ್ರತಿದೂರು ದಾಖಲಿಸಿದ್ದಾರೆ. ಅಲ್ಲದೆ ಇಬ್ಬರು ಜೀವ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ. ಉದಯರಾಜ ಪಟ್ಟಣದ ರಾಮತೀರ್ಥದ ಹಾಲಿ ನಿವಾಸಿಗಳಾದ ಮಹೇಶ ಬಹಿರಾಮ ಪಾಲೇಕರ ಸೇರಿ ಒಟ್ಟು 6 ಜನರ ವಿರುದ್ದ ಜೀವ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡ ಹೊನ್ನಾವರ ಪೊಲೀಸರು ದೂರು ಪ್ರತಿದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದಾರೆ.