ಶಿರಸಿ (ಉ.ಕ): ಭಟ್ಕಳ ಹೊರತುಪಡಿಸಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಎಲ್ಲಾ ಚಟುವಟಿಕೆಗಳಿಗೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು.
ಶಿರಸಿಯ ಕೆಡಿಸಿಸಿ ಬ್ಯಾಂಕ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಅಂಗಡಿ-ಮುಂಗಟ್ಟುಗಳಿಗೆ ಮಧ್ಯಾಹ್ನ 1 ಗಂಟೆಯವರಗೆ ಮಾತ್ರ ಅವಕಾಶ ಕೊಡಲಾಗಿತ್ತು. ಇಂದಿನಿಂದ ಸಂಜೆ 6 ಗಂಟೆವರೆಗೆ ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಲಾಗುವುದು ಎಂದರು.
ಭಟ್ಕಳ ಹೊರತುಪಡಿಸಿ ಉಳಿದೆಡೆ ವ್ಯಾಪಾರಕ್ಕೆ ಅವಕಾಶ ಆದರೆ ಅಂಗಡಿಕಾರರು, ಮಾಲೀಕರು, ಗ್ರಾಹಕರ ನಡುವೆ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಇದನ್ನು ಮರೆತು ವ್ಯವಹಾರ ನಡೆಸಿದರೆ ಅಂತಹವರ ಅಂಗಡಿ ಲೈಸನ್ಸ್ ರದ್ಧುಪಡಿಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದ ಬೇರೆ ಬೇರೆ ಕಡೆಯಿಂದ ಬರುವವರಿಗೆ ಹೋಮ್ ಕ್ವಾಂರಂಟೈನ್ ಕಡ್ಡಾಯವಾಗಿರುತ್ತದೆ. ಬೇರೆ ರಾಜ್ಯಗಳಿಂದ ಬಂದವರನ್ನು ಸರ್ಕಾರಿ ಕ್ವಾರಂಟೈನ್ನಲ್ಲಿಡಲಾಗುವುದು. ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ನೀಡಬೇಕಾದ ಸೌಲಭ್ಯ ಶೀಘ್ರದಲ್ಲಿ ತಲುಪಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.