ಕಾರವಾರ: ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ನಾರಿಶಕ್ತಿ ಟ್ಯಾಬ್ಲೋ ಜೊತೆಗೆ ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಹಾಲಕ್ಕಿ ಸುಗ್ಗಿ ಕುಣಿತದ ಪ್ರದರ್ಶನಕ್ಕೂ ಕೂಡ ಅವಕಾಶ ದೊರೆತಿದೆ. 74ನೇ ಗಣರಾಜ್ಯೋತ್ಸವದ ಅಂಗವಾಗಿ ಕರ್ತವ್ಯಪಥದಲ್ಲಿ ನಡೆಯಲಿರುವ ಪರೇಡ್ ಪಥಸಂಚಲನದಲ್ಲಿ ವಿದ್ಯಾಭ್ಯಾಸ ಇಲ್ಲದೆ ಇದ್ದರೂ ನಾಡಿಗೆ ಅಪ್ರತಿಮ ಕೊಡುಗೆ ನೀಡಿದ ಪದ್ಮಶ್ರೀ ಪುರಷ್ಕಾರಕ್ಕೆ ಪಾತ್ರರಾಗಿರುವ ಸಾಲುಮರದ ತಿಮ್ಮಕ್ಕ, ವೃಕ್ಷಮಾತೆ ತುಳಸಿ ಗೌಡ ಹಾಗೂ ಸೂಲಗಿತ್ತಿ ನರಸಮ್ಮ ಅವರ ಟ್ಯಾಬ್ಲೋ ಪ್ರದರ್ಶನ ನಡೆಯಲಿದೆ.
ದೆಹಲಿಗೆ ತೆರಲಿರುವ ಕಲಾತಂಡ:ಇದರ ಜೊತೆಗೆ ಉತ್ತರಕನ್ನಡ ಜಿಲ್ಲೆಯ ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿರುವ ಹಾಲಕ್ಕಿ ಸಮುದಾಯದವರ ಸುಗ್ಗಿ ಕುಣತ ಕೂಡ ನಾರಿಶಕ್ತಿ ಟ್ಯಾಬ್ಲೋ ಜೊತೆ ಪ್ರದರ್ಶನಗೊಳ್ಳಲಿದೆ. ಈಗಾಗಲೇ ಕಲಾವಿದ ಪುರುಷೋತ್ತಮ ಗೌಡ ಅವರ ನೇತೃತ್ವದಲ್ಲಿ ಸುಮಾರು 25 ಮಂದಿಯ ತಂಡ ದೆಹಲಿಗೆ ತೆರಳಿದೆ. ಅಲ್ಲದೆ ಕಳೆದ ಒಂದು ವಾರದಿಂದ ಅಭ್ಯಾಸದಲ್ಲಿ ತೊಡಗಿಕೊಂಡು ಜ.23 ರಂದು ಅಂತಿಮ ಹಂತದ ಅಭ್ಯಾಸದ ಪರೇಡ್ ಕೂಡ ನಡೆಸಿ ಪ್ರದರ್ಶನಕ್ಕೆ ಸಜ್ಜಾಗಿದೆ.
ಕಡಿಮೆ ಅವಧಿಯಲ್ಲಿ ಟ್ಯಾಬ್ಲೊ ಸಿದ್ದ:ಪಥಸಂಚಲನದಲ್ಲಿ ನಾರಿಶಕ್ತಿ ಟ್ಯಾಬ್ಲೋಗೆ ಕೊನೆ ಹಂತದಲ್ಲಿ ಅನುಮತಿ ದೊರೆತರೂ ಕೂಡ ಖ್ಯಾತ ವಿನ್ಯಾಸಕಾರ ಶಶಿಧರ ಅಡಪ ನೇತೃತ್ವದ ತಂಡ ಅತ್ಯಂತ ಉತ್ಕೃಷ್ಟ ಮಟ್ಟದಲ್ಲಿ ಟ್ಯಾಬ್ಲೋ ರಚನೆ ಮಾಡಿ ದೇಶದ ಗಮನ ಸೆಳೆಯುತ್ತಿದೆ. ಅದೆ ರೀತಿ ಉತ್ತರಕನ್ನಡ ಜಿಲ್ಲೆಯ ಕರಾವಳಿಯ ಪ್ರಸಿದ್ಧ ಹಾಲಕ್ಕಿ ಸುಗ್ಗಿ ಕುಣಿತಕ್ಕೆ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಖುಷಿಯಾಗಿದೆ ಎಂದು ತಂಡದ ನೇತೃತ್ವವಹಿಸಿರುವ ಕಲಾವಿದ ಪುರುಷೋತ್ತಮ ಗೌಡ ಸಂತಸ ವ್ಯಕ್ತಪಡಿಸಿದರು.
ಜನಮನ ಗೆದ್ದ ಪ್ರದರ್ಶನ:ತಂಡದಲ್ಲಿ 12 ಹೆಣ್ಣು ಮಕ್ಕಳು ಹಾಗೂ 13 ಮಂದಿ ಪುರುಷರು ಇದ್ದು ಜ.16 ರಂದು ದೆಹಲಿಗೆ ಆಗಮಿಸಿ ಕೊರೆಯುವ ಚಳಿ ನಡುವೆಯೂ ನಿರಂತರ ಅಭ್ಯಾಸ ನಡೆಸಿ ಇದೀಗ ಅಂತಿಮ ಪರೇಡ್‌ಗೆ ಸಜ್ಜಾಗಿದ್ದೇವೆ. ಅಲ್ಲದೆ ಈಗಾಗಲೇ ದೆಹಲಿಯ ಆರ್ಮಿ ಕ್ಯಾಂಪ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಕಲಾ ಪ್ರದರ್ಶನದಲ್ಲಿಯೂ ಪಾಲ್ಗೊಂಡು ತಂಡ ಉತ್ತಮ ಪ್ರದರ್ಶನ ನೀಡಿ ಜನಮನ ಗೆದ್ದಿದೆ ಎಂದು ಪುರುಷೋತ್ತಮ ಗೌಡ ತಿಳಿಸಿದರು.