ಕಾರವಾರ (ಉ.ಕ): ಅವರೆಲ್ಲಾ ನೂರಾರು ವರ್ಷಗಳಿಂದ ಅರಣ್ಯದಂಚಿನಲ್ಲೇ ಬದುಕು ಕಟ್ಟಿಕೊಂಡವರು. ಕೆಲ ದಿನಗಳ ಹಿಂದೆ ಅಬ್ಬರಿಸಿದ ಮಳೆಯಿಂದಾಗಿ ಇದ್ದೊಂದು ಸೂರನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಕಂಡುಕೇಳರಿಯದ ಪ್ರವಾಹಕ್ಕೆ ಮನೆ, ಜಮೀನು ಕಳೆದುಕೊಂಡು ಅರಣ್ಯವನ್ನೇ ಬಿಟ್ಟು ಬೇರೆಡೆ ತೆರಳುವ ಪರಿಸ್ಥಿತಿ ಕೆಳಾಶೆ ಗ್ರಾಮದ ಸಿದ್ದಿ ಜನಾಂಗಕ್ಕೆ ಬಂದೊದಗಿದೆ.
ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಕಳಾಶೆ ಗ್ರಾಮ ಪ್ರವಾಹದ ಹೊಡೆತಕ್ಕೆ ಸಿಲುಕಿ ಅಕ್ಷರಶಃ ನಲುಗಿದೆ. ಜುಲೈ 22ರ ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಗುಡ್ಡ ಕುಸಿತ ಉಂಟಾಗಿ ಮನೆ, ಜಮೀನುಗಳು ಸರ್ವನಾಶವಾಗಿವೆ. ಹೀಗಾಗಿ ಪ್ರವಾಹದ ನಡುವೆಯೇ ಜೀವ ಉಳಿಸಿಕೊಳ್ಳಲು ಮಕ್ಕಳನ್ನು ಕಟ್ಟಿಕೊಂಡು ಅಲ್ಲಿಂದ ಹೊರಬಂದಿದ್ದಾರೆ.
ಕಳಾಶೆ ಗ್ರಾಮದಲ್ಲಿ 40 ಮನೆಗಳಿದ್ದು, ಗೌಳಿಪಾಲದಲ್ಲಿದ್ದ 8 ಮನೆಗಳಿಗೆ ಹಾನಿಯಾಗಿದೆ. ಕೆಲವರು ಜೀವ ಭಯದಿಂದ ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಇನ್ನೂ ಕೆಲವರು ಬೇರೆಯವರ ಆಸರೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ.