ಕಾರವಾರ :ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಳವಾಗುತ್ತಿದ್ದಂತೆ ದೇಶದಲ್ಲಿಯೂ ಪೆಟ್ರೋಲ್, ಡಿಸೇಲ್ ದರ ಹೆಚ್ಚಳವಾಗುವ ಆತಂಕ ಎದುರಾಗಿದೆ. ಹಾಗಾಗಿ, ನೆರೆಯ ಗೋವಾ ರಾಜ್ಯಕ್ಕೆ ಗಡಿ ಪ್ರದೇಶದ ಮಂದಿ ಮುಗಿಬಿದ್ದಿದ್ದಾರೆ.
ಗೋವಾದಲ್ಲಿ ಇನ್ನೆರಡು ದಿನದಲ್ಲಿ ನಿರೀಕ್ಷಿತ ಪ್ರಮಾಣಕ್ಕಿಂತ ದುಪ್ಪಟ್ಟು ದರ ಹೆಚ್ಚಾಗಲಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಪೆಟ್ರೋಲ್ ತುಂಬಿಸಿಕೊಳ್ಳಲು ಸದಾಶಿವಗಡ, ಕಾರವಾರ ಭಾಗದ ಜನ ಗಡಿಭಾಗವಾದ ಗೋವಾದ ಪೋಳೆಮ್‌ನತ್ತ ದೌಡಾಯಿಸುತ್ತಿದ್ದಾರೆ.
ಈಗಾಗಲೇ ಗೋವಾದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 96.80 ರೂ. ಹಾಗೂ ಡೀಸೆಲ್ ದರ 87.43 ರಷ್ಟಿದೆ. ಇದೀಗ ಏಕಾಏಕಿ 22 ರೂ. ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಗುಲ್ಲೆಬ್ಬಿದೆ. ರಷ್ಯಾ ಹಾಗೂ ಉಕ್ರೇನ್ ಯುದ್ಧದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳವಾಗಿದೆ. ಅಲ್ಲದೆ ಚಿನ್ನದ ಬೆಲೆಯೂ ಗಗನಕ್ಕೇರಿದೆ.
ಈ ಮಧ್ಯೆ ಯುದ್ಧ ಅಷ್ಟೊಂದು ಪ್ರಮಾಣದಲ್ಲಿ ಪರಿಣಾಮ ಉಂಟು ಮಾಡುವುದಿಲ್ಲ ಎಂದು ನಿರೀಕ್ಷಿಸಲಾಗಿತ್ತಾದರೂ, ಇದೀಗ ಮನುಷ್ಯನ ಅತ್ಯಂತ ಅಗತ್ಯತೆಗಳಲ್ಲೊಂದಾದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಬಗ್ಗೆ ಈಗಾಗಲೇ ಪೆಟ್ರೋಲ್ ಪಂಪ್ ಮಾಲೀಕರು ಸ್ಪಷ್ಟಪಡಿಸಿದ್ದು, ಜನಕ್ಕೆ ಬರಸಿಡಿಲು ಬಡಿದಂತಾಗಿದೆ.
ಅದರಲ್ಲಿಯೂ ರಾಜ್ಯದ ಗಡಿಭಾಗವಾದ ಪೋಳೆಮ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಕನಿಷ್ಠ 4 ರೂ. ದಿಂದ ಗರಿಷ್ಠ 6 ರೂ.ಗಳಷ್ಟು ದರ ಏರಿಕೆಯಾಗಿತ್ತು. ಆದರೆ, ಇದೀಗ ಏಕಾಏಕಿ 22 ರೂಪಾಯಿಗಳಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ತಿಳಿದ ಜನ ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳಲು ಮುಗ್ಗಿಬಿದ್ದಿದ್ದಾರೆ.