ಕಾರವಾರ:ರಾಜ್ಯದಲ್ಲಿ ಕೊರೊನಾ ಅಬ್ಬರ ಮುಂದುವರಿದಿದ್ದು, ಕೋವಿಡ್ ಚೈನ್ ಬ್ರೇಕ್ ಮಾಡೋದಕ್ಕೆ ಎಲ್ಲೆಡೆ ಲಾಕ್ಡೌನ್ ಜಾರಿ ಮಾಡಲಾಗುತ್ತಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಲಾಕ್ಡೌನ್ ನಿಯಮಗಳು ದಿನೇ ದಿನೇ ಬದಲಾಗುತ್ತಿರುವುದು ಜನರಲ್ಲಿ ಗೊಂದಲವನ್ನುಂಟು ಮಾಡಿದ. ಹೀಗಾಗಿ ಜನ ಆಕ್ರೋಶ ಹೊರಹಾಕಿದ್ದಾರೆ.
ಹೌದು, ಕೋವಿಡ್ ಮಹಾಮಾರಿ ತನ್ನ ರಣಕೇಕೆ ಮುಂದುವರಿಸಿದೆ. ಕೊರೊನಾ ನಿಯಂತ್ರಿಸಲು ಸರ್ಕಾರ ಮತ್ತು ಆಯಾ ಜಿಲ್ಲಾಡಳಿತಗಳು ಹರಸಾಹಸ ಪಡುತ್ತಿವೆ. ಆದ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತ ಹೊರಡಿಸುವ ಧಿಡೀರ್ ಆದೇಶಕ್ಕೆ ಜನ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳ ಹಿಂದಷ್ಟೆ ಮಂಗಳವಾರ ಮತ್ತು ಶುಕ್ರವಾರ ಲಾಕ್ಡೌನ್ ಸಡಿಲಿಕೆ ನೀಡಲಾಗಿತ್ತು. ಹೀಗಾಗಿ ಜಿಲ್ಲೆಯ ಜನರು ಮಂಗಳವಾರದಂದು ಮಾರುಕಟ್ಟೆಗೆ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿದ್ದರು.
ಇನ್ನೂ ಕೆಲವರು ಶುಕ್ರವಾರ ಕೂಡ ಸಡಿಲಿಕೆ ಇದೆ ಎಂದು ಮಾರುಕಟ್ಟೆ ಕಡೆ ಆಗಮಿಸಿದ್ದರು. ಆದ್ರೆ ನಗರ, ಪಟ್ಟಣಕ್ಕೆ ಬಂದ ಜನರಿಗೆ ಪುಲ್ ಶಾಕ್ ಕಾದಿತ್ತು. ಎಲ್ಲೆಡೆಯೂ ಬಂದ್ ಆಗಿ ನಿನ್ನೆ ಸಂಜೆಯೇ ಜಿಲ್ಲಾಡಳಿತ ಇನ್ನೊಂದು ಆದೇಶ ಮಾಡಿ ಶುಕ್ರವಾರದಿಂದ ಭಾನುವಾರದವರೆಗೆ ಸಂಪೂರ್ಣ ಲಾಕ್ಡೌನ್ ಮಾಡಿ ಆದೇಶಿಸಿತ್ತು. ಇದು ತಿಳಿಯದ ಅದೆಷ್ಟೋ ಜನರು, ಮಾತ್ರವಲ್ಲದೆ ಸ್ವತಃ ಅಂಗಡಿಕಾರರು ಕಂಗಾಲಾಗಿದ್ದರು.
ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಬಸ್ ವ್ಯವಸ್ಥೆ ಇಲ್ಲ. ತರಕಾರಿ ಸೇರಿದಂತೆ ಯಾವುದು ಕೂಡ ಎಲ್ಲಾ ಕಡೆ ಮನೆ ಬಾಗಿಲಿಗೆ ಹೋಗುವುದಿಲ್ಲ. ಹೀಗಿರುವಾಗ ಜಿಲ್ಲಾಡಳಿತ ದಿನಕ್ಕೊಂದು ನಿಯಮ ಹೊರಡಿಸಿದಲ್ಲಿ ಜನರು ಸಾಕಷ್ಟು ಸಮಸ್ಯೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ವ್ಯಾಪಾರಸ್ಥರಿಗೂ ಯಾವಾಗ ಅಂಗಡಿ ತೆರೆಯುವುದು, ಯಾವಾಗ ಬಂದ್ ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯ ವ್ಯಾಪಾರಿಗಳು.