ಕಾರವಾರ:ಇಲ್ಲಿನ ದೇವಾಲಯದ ಕಟ್ಟಡ ನಿರ್ಮಾಣ ಸಹಾಯಾರ್ಥ ಕೆರೆಯಲ್ಲಿ ಮೀನು ಹಿಡಿಯುವುದಕ್ಕಾಗಿ ದೇವಸ್ಥಾನ ಕಮಿಟಿ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಮೀನು ಬೇಟೆಗಾಗಿ ಆಗಮಿಸಿದ್ದ ಸಾವಿರಾರು ಮಂದಿ ಕೆರೆಗೆ ಇಳಿದಿದ್ದರು. ಆದರೆ ಕೆರೆಯಲ್ಲಿ ಮೀನು ಸಿಕ್ಕಿಲ್ಲ ಎಂಬ ಕಾರಣಕ್ಕೆ ರೊಚ್ಚಿಗೆದ್ದು ಮೀನು ಬೇಟೆ ಆಯೋಜಿಸಿದ ಸಮಿತಿ ವಿರುದ್ಧವೇ ಕೋಪಗೊಂಡು ಗಲಾಟೆ ನಡೆಸಿದರು. ಪೆಂಡಾಲ್ ಸೇರಿದಂತೆ ಸಿಕ್ಕ ವಸ್ತುಗಳನ್ನೆಲ್ಲಾ ಹೊತ್ತೊಯ್ದರು.
ಶಿವಮೊಗ್ಗ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಯ ನಾನಾ ಕಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಕರೆ ಮೀನುಬೇಟೆಗಾಗಿ ಆಗಮಿಸಿದ್ದರು. ಈ ಹಿಂದೆಲ್ಲಾ ಪ್ರತಿ ವರ್ಷವೂ ಕೆರೆಬೇಟೆ ಆಯೋಜಿಸಲಾಗುತ್ತಿತ್ತು. ಆದರೆ ಕಳೆದ ಎರಡು ಮೂರು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಬೇಟೆ ಮಾಡಿರಲಿಲ್ಲ. ಅನೇಕ ವರ್ಷಗಳ ನಂತರದಲ್ಲಿ ಕಾರ್ಯಕ್ರಮ ಮಾಡಿರುವುದರಿಂದ ದೊಡ್ಡ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಆದರೆ ಕೆರೆಯಲ್ಲಿ ಮೀನುಗಳಿಲ್ಲದ ಕಾರಣ ಜನರು ಸಮಿತಿ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
600 ರೂ ಟಿಕೆಟ್: ಮೀನು ಬೇಟೆಗಾಗಿ ಸಮಿತಿಯವರು ಪ್ರತಿ ಕೂಣಿಕೆಗೆ 600 ರೂಪಾಯಿ ಹಣ ಪಡೆದುಕೊಂಡಿದ್ದರು. ಅದರಂತೆ, 3,000 ಸಾವಿರ ಜನರು 600 ರೂಪಾಯಿ ಹಣ ನೀಡಿ ಪ್ರವೇಶ ಪಡೆದು ಕೆರೆಯಲ್ಲಿ ಮೀನು ಬೇಟೆಗೆ ಇಳಿದಿದ್ದಾರೆ.