ಶಿರಸಿ(ಉತ್ತರ ಕನ್ನಡ):ಜಿಲ್ಲೆಯ ಘಟ್ಟದ ಮೇಲೆ ಮಳೆ ಬಂತೆಂದರೆ ಸಾಕು ಈ ಗ್ರಾಮದ ಜನ ಹೊರ ಊರಿನ ಸಂಪರ್ಕವನ್ನೇ ಕಳೆದುಕೊಳ್ಳುತ್ತಾರೆ. ಕಳೆದ ಎರಡು ವರ್ಷದಿಂದ ಸುರಿದ ಅಬ್ಬರದ ಮಳೆ ಈ ಗ್ರಾಮದಿಂದ ಅಂಕೋಲ ತಾಲೂಕು ಹಾಗೂ ಯಲ್ಲಾಪುರ ತಾಲೂಕುಗಳನ್ನು ಸಂಪರ್ಕಿಸುವ ಸೇತುವೆಗಳನ್ನು ಗಂಗಾವಳಿ ನದಿ ಆಹುತಿ ತೆಗೆದುಕೊಂಡಿತ್ತು. ಹೀಗಾಗಿ ಹೊಸ ಸೇತುವೆ ನಿರ್ಮಾಣವಾಗುವವರೆಗೆ ಪಣಸಗುಳಿ, ಕೈಗಡಿ ಸೇರಿದಂತೆ ಹಲವು ಗ್ರಾಮದ ಸಂಪರ್ಕಕ್ಕಾಗಿ ಪೈಪುಗಳನ್ನು ಬಳಸಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು.
ಈ ಸೇತುವೆ ಅತೀ ಕೆಳಭಾಗದಲ್ಲಿ ಇರುವುದರಿಂದ ಘಟ್ಟದ ಮೇಲೆ ಹಾಗೂ ಹುಬ್ಬಳ್ಳಿ, ಧಾರವಾಡದಲ್ಲಿ ಮಳೆಯಾದರೆ ಗಂಗಾವಳಿ ನದಿ ಉಕ್ಕಿ ಈ ಸೇತುವೆಯ ಮೇಲೆ ಹರಿಯುತ್ತದೆ. ಇದರಿಂದಾಗಿ ಪ್ರವಾಹ ಇಳಿಯುವ ವರೆಗೂ ಈ ಗ್ರಾಮಗಳಿಗೆ ಹೊರ ಜಗತ್ತಿನ ಸಂಪರ್ಕವೇ ಇರುವುದಿಲ್ಲ. ಹೀಗಾಗಿ ಶೀಘ್ರದಲ್ಲಿ ಸೇತುವೆ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.