ಕಾರವಾರ: ಕಾರವಾರದ ಕದಂಬ ನೌಕಾನೆಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ನೌಕೆ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಿದ್ದು, 10 ಸಾವಿರಕ್ಕೂ ಹೆಚ್ಚು ಜನರು ಅಪರೂಪದ ನೌಕೆಯನ್ನು ಕಣ್ತುಂಬಿಕೊಂಡಿದ್ದಾರೆ.
ವರ್ಷವಿಡಿ ಭಾರೀ ಭದ್ರತೆಯಲ್ಲಿರುವ ನೌಕೆಯನ್ನು ನೋಡಲು ಸಿಗುವುದೇ ಅಪರೂಪ. ಕಾರವಾರದ ಕದಂಬ ನೌಕಾನೆಲೆಯಲ್ಲಿ ತಂಗಿದ್ದ ಐಎನ್ಎಸ್ ವಿಕ್ರಮಾದಿತ್ಯ ಹಾಗೂ ಐಎನ್ಎಸ್ ಸುವರ್ಣ ಯುದ್ಧ ನೌಕೆಗಳ ವೀಕ್ಷಣೆಗೆ ಇಂದು ಬೆಳಗ್ಗೆಯಿಂದ ಸಂಜೆವರೆಗೆ ಅವಕಾಶ ಕಲ್ಪಿಸಲಾಗಿತ್ತು.
ಯುದ್ದ ನೌಕೆ ವಿಕ್ರಮಾದಿತ್ಯ ನೋಡಲು ಜನಸಾಗರ ಏಷ್ಯಾದಲ್ಲಿಯೇ ಅತಿ ದೊಡ್ಡ ವಿಮಾನ ವಾಹಕ ಯುದ್ದ ನೌಕೆಯಾದ ಇದು ಸುಮಾರು 44,500 ಟನ್ ತೂಕ, 284 ಮೀಟರ್ ಉದ್ದ, 60 ಮೀಟರ್ ಎತ್ತರ ಇದೆ. 34 ಯುದ್ದ ವಿಮಾನ ಹಾಗೂ ಹೆಲಿಕಾಪ್ಟರ್ ಗಳನ್ನು ಏಕಕಾಲದಲ್ಲಿ ಹೊರುವ ಸಾಮರ್ಥ್ಯ ಇದಕ್ಕಿದೆಯೆಂದು ವಿಮಾನ ವಾಹಕ ಯುದ್ದ ನೌಕೆ ಬಗ್ಗೆ ಸಿಬ್ಬಂದಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನ ನೌಕಾನೆಲೆ ವೀಕ್ಷಣೆಗೆ ಆಗಮಿಸಿದ್ದರಿಂದ ನೌಕಾನೆಲೆ ಮುಂಭಾಗ ಹೆದ್ದಾರಿವರೆಗೆ ಜನಸಂದಣಿ ಚಾಚಿಕೊಂಡಿತ್ತು. ಗೇಟ್ ಒಳಭಾಗದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಇದ್ದ ಕಾರಣ ಸಾರ್ವಜನಿಕರು ಗಂಟೆ ಗಟ್ಟಲೇ ಸರದಿ ಸಾಲಿನಲ್ಲಿ ಕಾದು ಬಳಿಕ ವಿಕ್ರಮಾದಿತ್ಯ ನೌಕೆಯ ಮೆಟ್ಟಿಲೇರುವಂತಾಯಿತು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು, ಅಧಿಕಾರಿಗಳು, ವಿವಿಧ ಇಲಾಖೆ ನೌಕರರು ಸೇರಿದಂತೆ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿತ್ತು.