ಕಾರವಾರ: ಆರ್‌ಬಿಐ ಸದ್ಯ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದ್ದು ಬ್ಯಾಂಕ್ಗಳಿಗೆ ನೀಡಿ ಸಾರ್ವಜನಿಕರು ನೋಟು ಬದಲಾಯಿಸಿಕೊಳ್ಳುವಂತೆ ಸೂಚಿಸಿದೆ. ಇದರಿಂದ ಜನಸಾಮಾನ್ಯರ ವ್ಯವಹಾರದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿದಂತೆ ಕಂಡು ಬಂದಿಲ್ಲ.
ಆದರೆ, ಕಳೆದ ಕೆಲ ವರ್ಷಗಳ ಹಿಂದೆ ಚಲಾವಣೆಗೊಂಡ 10 ರೂಪಾಯಿ ನಾಣ್ಯ ಬ್ಯಾನ್ ಮಾಡಲಾಗಿದೆ ಎಂಬ ಸುಳ್ಳು ಸುದ್ದಿಯಿಂದ ಯಾರು ಇದನ್ನೂ ತೆಗೆದುಕೊಳ್ಳುತ್ತಿಲ್ಲ. ಇದರಿಂದ 10 ರೂ ನಾಣ್ಯಗಳ ಸಂಗ್ರಹ ಬ್ಯಾಂಕ್‌ಗಳಲ್ಲಿ ಮಾತ್ರ ರಾಶಿಯಾಗಿ ಬಿದ್ದು ಹೊರೆಯಾಗುತ್ತಿವೆ. ಹೌದು.. ಕಳೆದ ಕೆಲ ವರ್ಷಗಳ ಹಿಂದೆ ಬಿಡುಗಡೆಗೊಂಡು ಮಾರುಕಟ್ಟೆಗೆ ಬಂದಿದ್ದ ವೇಳೆ ಜನರನ್ನು ಆಕರ್ಷಿಸಿದ್ದ 10 ರೂಪಾಯಿ ನಾಣ್ಯಗಳು, ಇದೀಗ ಕೊಟ್ಟರೂ ಜನ ಪಡೆಯಲು ಹಿಂದೇಟು ಹಾಕುವವರ ಸಂಖ್ಯೆ ಹೆಚ್ಚಾಗಿದೆ.
ಅದರಲ್ಲೂ 10ರ ನಾಣ್ಯಗಳನ್ನು ಬ್ಯಾನ್ ಮಾಡಲಾಗಿದೆ ಎಂಬ ಸುಳ್ಳು ವದಂತಿಯಿಂದ ಉತ್ತರಕನ್ನಡ ಜಿಲ್ಲೆಯಲ್ಲಿ 10 ರೂಪಾಯಿ ನಾಣ್ಯಗಳನ್ನು ಯಾವುದೇ ಅಂಗಡಿಕಾರರೂ ತೆಗೆದುಕೊಳ್ಳಲು ತಯಾರಿಲ್ಲ. 10ರ ನಾಣ್ಯಗಳು ಬ್ಯಾನ್ ಆಗಿವೆ ಎನ್ನುವ ಸುಳ್ಳು ವದಂತಿಯಿಂದ ನಾಣ್ಯಗಳನ್ನು ತೆಗೆದುಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದು, ಹತ್ತರ ನಾಣ್ಯಗಳಿಗೆ ಬೆಲೆಯಿಲ್ಲದಂತಾಗಿದೆ. ಅದರಲ್ಲಿ ಅಂಗಡಿಕಾರರು, ವ್ಯಾಪಾರಸ್ಥರು, ಬಸ್ ನಿರ್ವಾಹಕರಿಂದ 10 ರೂಪಾಯಿ ನಾಣ್ಯ ಜನ ಪಡೆಯದ ಕಾರಣ ಕಾಲಕ್ರಮೇಣ ಅವರು ಕೂಡ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ.
ಅಲ್ಲದೇ ಅದೆಷ್ಟೊ ಜನರು 10 ರೂಪಾಯಿ ನಾಣ್ಯ ಮರೆತು ಬಿಟ್ಟಿದ್ದಾರೆ. ಆದರೆ, ಹಲವರ ಮನೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ 10 ರೂಪಾಯಿ ನಾಣ್ಯಗಳ ಸಂಗ್ರಹ ಇದೆ. ಸರ್ಕಾರ ಬ್ಯಾನ್ ಮಾಡದಿದ್ದರೂ ಚಲಾವಣೆಯಾಗದಿದ್ದರಿಂದ ಉಪಯೋಗಕ್ಕೆ ಬಾರದಂತಾಗಿ ಮನೆಯಲ್ಲಿ ಇಟ್ಟುಕೊಳ್ಳಬೇಕಾಗಿದೆ ಎನ್ನುತ್ತಾರೆ ಸ್ಥಳೀಯರಾದ ಸಂಜೀವ್.
ಜಾಗೃತಿ ಮೇಳ ಆಯೋಜನೆ:ಇನ್ನು ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ಸದ್ಯ 5 ಕೋಟಿಗೂ ಅಧಿಕ 10 ರೂಪಾಯಿ ನಾಣ್ಯಗಳ ಸಂಗ್ರಹವಿದ್ದು, ಚಲಾವಣೆಯಿಲ್ಲದೇ ಬ್ಯಾಂಕ್‌ಗಳಲ್ಲೇ ಕೊಳೆಯುತ್ತಿವೆ. ಹೀಗಾಗಿ ಕೆಲವೊಂದು ಬ್ಯಾಂಕ್‌ಗಳೂ ಸಹ 10ರ ನಾಣ್ಯಗಳನ್ನು ಪಡೆದು ನೋಟುಗಳನ್ನ ನೀಡಲು ನಿರಾಕರಿಸುತ್ತಿವೆ. ಹೀಗಾಗಿ ಬ್ಯಾಂಕ್‌ನ ವ್ಯವಸ್ಥಾಪಕರಿಗೆ ಜಿಲ್ಲಾ ಲೀಡ್ ಬ್ಯಾಂಕ್, ನಾಣ್ಯಗಳನ್ನು ಪಡೆದುಕೊಳ್ಳಲೇಬೇಕು ಎನ್ನುವ ಸೂಚನೆ ನೀಡಿದೆ.