ಕರ್ನಾಟಕ

karnataka

ETV Bharat / state

ತುರ್ತು ಚಿಕಿತ್ಸೆಗೆ ಹೊರ ಜಿಲ್ಲೆಗೆ ಹೋಗ್ಬೇಕು; ಆಂಬ್ಯುಲೆನ್ಸ್ ದುಬಾರಿ, ರೋಗಿಗಳ ಸಂಕಟ ಕೇಳೋರಿಲ್ಲ! - ಶಾಸಕಿ ರೂಪಾಲಿ ನಾಯ್ಕ

ಉತ್ತರಕನ್ನಡ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಯಾವುದೇ ರೋಗಿಯು ತುರ್ತುಸ್ಥಿತಿಯಲ್ಲಿ ಚಿಕಿತ್ಸೆಗೆ ಬಂದರೆ ಅವರನ್ನು ಮಂಗಳೂರು, ಉಡುಪಿ, ಹುಬ್ಬಳ್ಳಿ ಇಲ್ಲವೇ ಗೋವಾ ಹೀಗೆ ಬೇರೆಡೆಯ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.

ಆಂಬುಲೆನ್ಸ್​
ಆಂಬುಲೆನ್ಸ್​

By

Published : Oct 19, 2022, 4:47 PM IST

ಕಾರವಾರ: ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದ ಕಾರಣ ಜನರು ತುರ್ತು ಆರೋಗ್ಯ ಸೇವೆಗಳಿಗಾಗಿ ಹೊರ ಜಿಲ್ಲೆಗಳನ್ನೇ ಅವಲಂಬಿಸಿದ್ದಾರೆ. ಇಂತಹ ಸಂದರ್ಭದಲ್ಲಿ ದೂರದೂರದ ಆಸ್ಪತ್ರೆಗಳಿಗೆ ತೆರಳಲು ಆಂಬ್ಯುಲೆನ್ಸ್‌ಗಳು ಅತ್ಯಗತ್ಯ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಖಾಸಗಿ ಅಂಬ್ಯುಲೆನ್ಸ್‌ಗಳು ರೋಗಿಗಳಿಗೆ ದುಬಾರಿ ಶುಲ್ಕ ವಿಧಿಸುವುದು ಒಂದೆಡೆಯಾದ್ರೆ, ಸರ್ಕಾರಿ ಆಂಬ್ಯುಲೆನ್ಸ್ ಚಾಲಕರೂ ಸಹ ಬಡ ಕುಟುಂಬದವರಿಂದ ಬೇಕಾಬಿಟ್ಟಿ ಹಣ ಕೀಳುತ್ತಿರುವ ಆರೋಪ ಕೇಳಿಬಂದಿದೆ.

ಪ್ರವಾಸೋದ್ಯಮದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿಕೊಂಡಿರುವ ಜಿಲ್ಲೆ ಉತ್ತರಕನ್ನಡ. ಆದರೆ ಇಂತಹದ್ದೊಂದು ಜಿಲ್ಲೆಯಲ್ಲಿ ಒಂದೂ ಸುಸಜ್ಜಿತ ಆಸ್ಪತ್ರೆ ಇಲ್ಲದಿರುವುದು ನಿಜಕ್ಕೂ ಜನರ ದೌರ್ಭಾಗ್ಯ. ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ಇಲ್ಲದಿರೋದು ಯಾವುದೇ ರೋಗಿ ತುರ್ತುಸ್ಥಿತಿಯಲ್ಲಿ ಚಿಕಿತ್ಸೆಗೆ ಬಂದರೆ ಅವರನ್ನು ಮಂಗಳೂರು, ಉಡುಪಿ, ಹುಬ್ಬಳ್ಳಿ ಅಥವಾ ಗೋವಾ ಹೀಗೆ ಬೇರೆಡೆಯ ಆಸ್ಪತ್ರೆಗೆ ಕಳುಹಿಸಬೇಕಾದ ಅನಿವಾರ್ಯತೆ ಇದೆ.

ಆಂಬ್ಯುಲೆನ್ಸ್ ದುಬಾರಿ, ರೋಗಿಗಳ ಸಂಕಟ ಕೇಳೋರಿಲ್ಲ

ಅಂತಹ ಸಂದರ್ಭದಲ್ಲಿ ರೋಗಿಯ ಸಂಬಂಧಿಕರು ಆಂಬ್ಯುಲೆನ್ಸ್‌ಗಳನ್ನೇ ನಂಬಿಕೊಂಡು ಆಸ್ಪತ್ರೆಗಳಿಗೆ ತೆರಳುತ್ತಾರೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಕೆಲ ಆಂಬ್ಯುಲೆನ್ಸ್ ಚಾಲಕರು ಇದನ್ನೇ ದುರುಪಯೋಗ ಮಾಡಿಕೊಂಡು ಮನಬಂದಂತೆ ಹಣ ವಸೂಲಿ ಮಾಡುತ್ತಿದ್ದಾರಂತೆ.

'ಕಳೆದ ಕೆಲ ದಿನಗಳ ಹಿಂದೆ ಕಾರವಾರದ ಲಕ್ಷ್ಮಣಸ್ವಾಮಿ ಎಂಬ ರೋಗಿಯು ಹೃದಯ ಖಾಯಿಲೆಗೆ ಸಂಬಂಧಿಸಿದ ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಆ ಸಂದರ್ಭದಲ್ಲಿ ರೋಗಿಯನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ತಿಳಿಸಿದ್ದು, ತಕ್ಷಣ ಆಸ್ಪತ್ರೆ ಆಂಬ್ಯುಲೆನ್ಸ್‌ನಲ್ಲೇ ಮಂಗಳೂರಿಗೆ ಹೋಗಿದ್ದಾರೆ. ಈ ವೇಳೆ ಚಾಲಕ ಸರ್ಕಾರಿ ಶುಲ್ಕ 3,500 ರೂಪಾಯಿ ಇದ್ದರೂ ಸಹ ರೋಗಿಯ ಕುಟುಂಬಸ್ಥರಿಗೆ 7,500 ರೂಪಾಯಿ ಕೊಡುವಂತೆ ಒತ್ತಾಯ ಮಾಡಿದ್ದಾನೆ. ರೋಗಿಯ ಕುಟುಂಬಸ್ಥರು ನಾವು ಬಡವರು ನಮ್ಮ ಬಳಿ ಅಷ್ಟು ಹಣವಿಲ್ಲ ಎಂದರೂ ಕೇಳದೆ ಪೀಡಿಸಿ ಹಣ ವಸೂಲಿ ಮಾಡಿದ್ದಾರೆ' ಎಂದು ಸಾಮಾಜಿಕ ಕಾರ್ಯಕರ್ತ ವಿಲ್ಸನ್​​ ಫರ್ನಾಂಡೀಸ್​ ಬೇಸರ ವ್ಯಕ್ತಪಡಿಸಿದರು.

'ಹೆಚ್ಚಿನ ಹಣ ವಸೂಲಿ':ಸರ್ಕಾರಿ ಆಸ್ಪತ್ರೆಯಿಂದ ರೋಗಿಯನ್ನು ಬೇರೆ ಆಸ್ಪತ್ರೆಗೆ ಸೇರಿಸಬೇಕಾದರೆ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಇಂತಿಷ್ಟು ರಿಯಾಯಿತಿ, ಬಡತನ ರೇಖೆಗಿಂತ ಕೆಳಗಿದ್ದವರಿಗೆ ಅಧಿಕಾರಿಗಳ ಅನುಮತಿ ಪಡೆದು ಉಚಿತವಾಗಿ ಕರೆದುಕೊಂಡು ಹೋಗಬೇಕು ಎನ್ನುವ ನಿಯಮವಿದೆ. ಹೀಗಿದ್ದರೂ ಸಹ ಕಾರವಾರದಿಂದ ಮಂಗಳೂರಿಗೆ ಆಂಬ್ಯುಲೆನ್ಸ್ ಮೂಲಕ ರೋಗಿಯನ್ನು ಕರೆದುಕೊಂಡು ಹೋದ ಚಾಲಕ ರವಿ ಎಂಬಾತ ಬಿಪಿಎಲ್ ಕಾರ್ಡ್ ಹೊಂದಿದವರಾಗಿದ್ದರೂ ಸಹ ಹೆಚ್ಚಿನ ಹಣ ವಸೂಲಿ ಮಾಡಿದ್ದಾನೆ ಎಂದು ಅವರು ಹೇಳುತ್ತಾರೆ.

ಉಪವಾಸ ಸತ್ಯಾಗ್ರಹ: ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ವಿಲ್ಸನ್ ಫರ್ನಾಂಡೀಸ್ ಜಿಲ್ಲಾಧಿಕಾರಿ, ಕ್ರಿಮ್ಸ್‌ನ ಆಡಳಿತಾಧಿಕಾರಿಗೆ ದೂರು ನೀಡುವ ಮೂಲಕ ಆ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಆಸ್ಪತ್ರೆ ಎದುರು ಉಪವಾಸ ಸತ್ಯಾಗ್ರಹ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ, 'ಆಸ್ಪತ್ರೆ ಅವ್ಯವಸ್ಥೆ ಕುರಿತು ಆರೋಗ್ಯ ಸಚಿವರು ಬಂದ ಸಂದರ್ಭದಲ್ಲಿಯೇ ಅವರಿಗೆ ವಿವರಿಸಿ ಹೇಳಿದ್ದೇವೆ. ಮುಂದಿನ ದಿನಗಳಲ್ಲಿ ಆಸ್ಪತ್ರೆ ಆವರಣದಲ್ಲಿ ಆಂಬ್ಯುಲೆನ್ಸ್ ಬಾಡಿಗೆ ಕುರಿತು ಮಾಹಿತಿ ಫಲಕ ಹಾಕಲು ಸೂಚಿಸಲಾಗಿದೆ' ಎಂದು ತಿಳಿಸಿದರು.

ಇದನ್ನೂ ಓದಿ:108 ಆ್ಯಂಬುಲೆನ್ಸ್‌ ಸಮಸ್ಯೆ ಪರಿಹರಿಸಲಾಗಿದೆ, ನಿನ್ನೆಯಿಂದ ಸೇವೆ ಪುನಾರಂಭವಾಗಿದೆ: ಸಚಿವ ಸುಧಾಕರ್

ABOUT THE AUTHOR

...view details