ಕಾರವಾರ:ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೊನ್ನಾವರದ ಯುವಕ ಪರೇಶ್ ಮೇಸ್ತಾ ಸಾವಿನ ಪ್ರಕರಣ ರಾಜ್ಯದ ಕರಾವಳಿಯಲ್ಲಿ ಗಲಭೆಗೆ ಕಾರಣವಾಗಿತ್ತು. ಅಲ್ಲದೇ ಇದೇ ಪ್ರಕರಣ ಜಿಲ್ಲೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ನೆರವಾಗಿತ್ತು.
ಆದರೆ ಈ ಪ್ರಕರಣ ನಡೆದು ನಾಲ್ಕು ವರ್ಷಗಳೇ ಕಳೆದಿದ್ದರೂ ಇದುವರೆಗೂ ಯುವಕನ ಸಾವಿಗೆ ನಿಖರ ಕಾರಣ ಏನು ಎನ್ನುವುದು ಇದುವರೆಗೂ ತಿಳಿದುಬಂದಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಿದ್ದರೂ ಸಹ ಇದುವರೆಗೂ ಪ್ರಕರಣ ಬಗೆಹರಿದಿಲ್ಲ.
ಅಂದು 2017ರ ಡಿಸೆಂಬರ್ 6. ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ವೇಳೆ ಪರೇಶ್ ಮೇಸ್ತಾ ಎನ್ನುವ ಯುವಕ ಕಾಣೆಯಾಗಿದ್ದ. ತೀವ್ರ ಹುಡುಕಾಟದ ಬಳಿಕ ಡಿಸೆಂಬರ್ 8ರಂದು ಪಟ್ಟಣದ ಶನೈಶ್ಚರ ದೇವಾಲಯದ ಹಿಂಬದಿಯ ಶೆಟ್ಟಿ ಕೆರೆಯಲ್ಲಿ ಯುವಕನ ಶವ ಪತ್ತೆಯಾಗಿದ್ದು ಆತನನ್ನ ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇಡೀ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೇ ಮೃತ ಯುವಕನನ್ನು ಹಿಂದೂ ಕಾರ್ಯಕರ್ತ ಎಂದು ಬಿಂಬಿಸಿದ ಬಿಜೆಪಿ, ಯುವಕನ ಹತ್ಯೆಗೆ ನ್ಯಾಯ ಒದಗಿಸಿಕೊಡುವಂತೆ ಹೋರಾಟಕ್ಕೆ ಮುಂದಾಗಿದ್ದು ಇದು ಇಡೀ ಜಿಲ್ಲೆಯಲ್ಲಿ ದೊಡ್ಡ ಗಲಭೆಗೂ ಕಾರಣವಾಗಿತ್ತು.
ಸಿಬಿಐಗೆ ಪ್ರಕರಣ:
ಇದಾದ ಬಳಿಕ, 2018ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಯುವಕ ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನೇ ಪ್ರಚಾರದ ಅಸ್ತ್ರವಾಗಿಸಿಕೊಂಡಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಹಿಂದೂ ಕಾರ್ಯಕರ್ತನ ಹತ್ಯೆ ಎನ್ನುವಂತೆ ಬಿಂಬಿಸಲಾಗಿತ್ತು. ರಾಜ್ಯದ ಕರಾವಳಿಯಲ್ಲಿ ಹಿಂದುತ್ವದ ಅಲೆಯನ್ನೇ ಎಬ್ಬಿಸಿದ್ದ ಬಿಜೆಪಿ ಪಕ್ಷ ಹಿಂದೂ ಕಾರ್ಯಕರ್ತನ ಹತ್ಯೆಗೆ ನ್ಯಾಯ ಒದಗಿಸುವಂತೆ ಹೋರಾಟ ನಡೆಸಿತ್ತು. ಅಲ್ಲದೇ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಕುಟುಂಬಸ್ಥರ ಮೂಲಕ ಸರ್ಕಾರವನ್ನ ಒತ್ತಾಯಿಸಿದ್ದು ಅದರಂತೆ ಪ್ರಕರಣವನ್ನ ಸಿಬಿಐ ತನಿಖೆಗೂ ವಹಿಸಲಾಗಿತ್ತು.