ಕಾರವಾರ:ಪರೇಶ್ ಮೇಸ್ತ ಪ್ರಕರಣ ಕಳೆದ ವಿಧಾನಸಭಾ ಚುನಾವಣೆ ವೇಳೆ ಉತ್ತರ ಕನ್ನಡ ಜಿಲ್ಲೆಯ ಹಾಟ್ ಇಶ್ಯೂ ಆಗಿತ್ತು. ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಇದೇ ಪ್ರಕರಣವನ್ನ ಇಟ್ಟುಕೊಂಡು ಹೋರಾಟ ನಡೆಸಿದ್ದರು. ಸದ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು ವಿರೋಧ ಪಕ್ಷ ಕಾಂಗ್ರೆಸ್ ಇದೇ ಪ್ರಕರಣವನ್ನ ಕೆದಕಲು ಪ್ರಾರಂಭಿಸಿದೆ. ಐದು ವರ್ಷದಿಂದ ನಡೆಸುತ್ತಿರುವ ತನಿಖೆಯನ್ನು ಇತ್ಯರ್ಥಗೊಳಿಸಿ ಎನ್ನುವ ಆಗ್ರಹವನ್ನು ಕಾಂಗ್ರೆಸ್ ನಾಯಕರು ಮಾಡಲು ಪ್ರಾರಂಭಿಸಿದ್ದು, ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಹೌದು, ಕಳೆದ 2018ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದ್ದು ಪರೇಶ್ ಮೇಸ್ತ ಎನ್ನುವ ಯುವಕನ ಸಾವಿನ ಪ್ರಕರಣ ಇಡೀ ರಾಜ್ಯದಲ್ಲಿ ತಲ್ಲಣ ಮಾಡಿಸಿತ್ತು. ಕೋಮುಗಲಭೆ ವೇಳೆ ನಾಪತ್ತೆಯಾಗಿದ್ದ ಪರೇಶ್ ಮೇಸ್ತ ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ಕೋಮು ದ್ವೇಷದಿಂದಲೇ ಕೊಲೆ ಮಾಡಿರುವುದಾಗಿ ಬಿಜೆಪಿ ನಾಯಕರು, ಕಾರ್ಯಕರ್ತರು ಬೀದಿಗೆ ಇಳಿದು ಹೋರಾಟ ನಡೆಸಿದ್ದರು.
ಅಂದಿನ ಕಾಂಗ್ರೆಸ್ ಸರ್ಕಾರಕ್ಕೂ ಈ ಪ್ರಕರಣ ಮುಜುಗರ ತಂದಿದ್ದು, ಸಿಬಿಐ ತನಿಖೆಗೆ ಸಹ ವಹಿಸಲಾಗಿತ್ತು. ಸದ್ಯ ಇದೇ ಪ್ರಕರಣ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಜೀವ ಪಡೆಯಲು ಹೊರಟಿದ್ದು. ವಿರೋಧ ಪಕ್ಷವಾದ ಕಾಂಗ್ರೆಸ್ನವರು ಪರೇಶ್ ಮೇಸ್ತ ಪ್ರಕರಣದ ಬಗ್ಗೆ ಧ್ವನಿ ಎತ್ತಲು ಪ್ರಾರಂಭಿಸಿದ್ದಾರೆ.
ಸಿಬಿಐ ತನಿಖೆ ಪ್ರಾರಂಭಿಸಿ ಐದು ವರ್ಷವಾದರೂ ಇನ್ನೂ ಆರೋಪಿಗಳನ್ನ ಪತ್ತೆಹಚ್ಚಿಲ್ಲ. ಬಿಜೆಪಿಗರು ಈ ಬಾರಿ ಸಹ ಇದೇ ವಿಚಾರವನ್ನ ಇಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ. ಪರೇಶ್ ಮೇಸ್ತ ಸಾವಿನ ಹಿಂದೆ ಯಾರು ಇದ್ದಾರೆ? ಎಂದು ಸ್ಪಷ್ಟಪಡಿಸಲಿ, ಇಲ್ಲ ಅಸಹಜ ಸಾವಾಗಿದ್ದರೆ ಅಸಹಜ ಎಂದು ಘೋಷಿಸಲಿ ಎನ್ನುವ ಆಗ್ರಹವನ್ನ ಕಾಂಗ್ರೆಸ್ ನಾಯಕರು ಮಾಡಲು ಹೊರಟಿದ್ದಾರೆ.