ಕಾರವಾರ:ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಪರೇಶ್ ಮೆಸ್ತಾ ಸಾವಿನ ಪ್ರಕರಣ ಒಂದನೇ ಆರೋಪಿಯಾದ ಜಮಾಲ್ ಅಜಾದ್ ಅಣ್ಣಿಗೇರಿ ಎಂಬಾತನನ್ನು ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರ್ಕಾರ ನೇಮಕ ಆದೇಶವನ್ನು ತಡೆ ಹಿಡಿದಿದೆ.
2017ರ ಡಿಸೆಂಬರ್ ತಿಂಗಳಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿ ಕೋಮು ಗಲಭೆ ನಡೆದಿತ್ತು. ಘಟನೆಯ ಬಳಿಕ ಪಟ್ಟಣದ ಪರೇಶ್ ಮೆಸ್ತಾ ನಾಪತ್ತೆಯಾದ ಎರಡು ದಿನಗಳ ನಂತರ ಆತನ ಶವ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಈತನನ್ನು ಕೋಮು ಗಲಭೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಬಿಜೆಪಿ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ಅಂದಿನ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೂ ಒಪ್ಪಿಸಿತ್ತು.
ಈ ಪ್ರಕರಣ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಮೇರೆಗೆ ಜಮಾಲ್ ಅಜಾದ್ ಅಣ್ಣಿಗೇರಿಯನ್ನು ಎ-1 ಆರೋಪಿಯನ್ನಾಗಿ ಮಾಡಿ ಬಂಧಿಸಲಾಗಿತ್ತು. ಈ ಪ್ರಕರಣದ ಸಿಬಿಐ ತನಿಖೆ ಇನ್ನೂ ನಡೆಯುತ್ತಿದ್ದು ಬಂಧಿತರೆಲ್ಲರೂ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದರ ನಡುವೆ ಕೆಲ ದಿನಗಳ ಹಿಂದೆ ಜಿಲ್ಲಾ ವಕ್ಫ್ ಬೋರ್ಡ್ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಅಜಾದ್ ಅಣ್ಣಿಗೇರಿಗೆ ನೀಡಿರುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ವಕ್ಫ್ ಬೋರ್ಡ್‌ಗೆ ಪರೇಶ ಮೆಸ್ತಾ ಪ್ರಕರಣದ ಆರೋಪಿ ನೇಮಕ: ವಿರೋಧದ ಬೆನ್ನಲ್ಲೇ ಆದೇಶಕ್ಕೆ ತಡೆ ಪರೇಶ್ ಮೆಸ್ತಾ ಸಾವಿನ ಪ್ರಕರಣ ಮುಂದಿಟ್ಟುಕೊಂಡು ಹೋರಾಟ ನಡೆಸಿದ್ದ ಬಿಜೆಪಿಯೇ ಈಗ ಆರೋಪಿಯನ್ನು ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವುದನ್ನು ಕಾಂಗ್ರೆಸ್ ಕೂಡ ಟೀಕಿಸಿದೆ. ಹೆಣದ ಮುಂದೆ ರಾಜಕೀಯ ಮಾಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯು ಸರ್ಕಾರದ ಭಾಗವಾಗಿರುವ ಅಂಗಸಂಸ್ಥೆಯಲ್ಲಿ ಆರೋಪಿಗೆ ಸ್ಥಾನ ಕೊಟ್ಟಿದೆ. ಈ ಮೂಲಕ ಆ ಕುಟುಂಬದವರಿಗೆ ನ್ಯಾಯ ಕೊಡುವುದಾಗಿ ಹೇಳಿಕೊಂಡು ಅನ್ಯಾಯ ಎಸಗಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಶಂಬು ಶೆಟ್ಟಿ ವಾಗ್ದಾಳಿ ನಡೆಸಿದ್ದಾರೆ.
ಶಾಸಕಿಯಿಂದಲೂ ವಿರೋಧ: ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯರ ಪಟ್ಟಿಯಲ್ಲಿ ಬೇರೆ ಪಕ್ಷದ ಅಜಾದ್ ಅಣ್ಣಿಗೇರಿ ಹಾಗೂ ಕೆ.ಹೆಚ್.ಕರೀಂ ಹಾಜಿ ಅವರನ್ನು ನೇಮಕ ಮಾಡಿದ್ದು ಪದಾಧಿಕಾರಿಗಳನ್ನು ಬದಲಿಸುವಂತೆ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮಹಮ್ಮದ್ ಅನೀಷ ತಹಶಿಲ್ದಾರ್ ಮುಜರಾಯಿ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಕ್ರಮಕ್ಕೆ ಸ್ವತಃ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಕೂಡ ಆಕ್ರೋಶ ಹೊರಹಾಕಿದ್ದಾರೆ.
ಪರೇಶ ಮೇಸ್ತಾ ಸಾವಿನ ನ್ಯಾಯಕ್ಕಾಗಿ ಕುಟುಂಬ ಇನ್ನೂ ಕೂಡ ಕಣ್ಣೀರು ಹಾಕುತ್ತಿದೆ. ಹೀಗಿರುವಾಗ ಆರೋಪಿಗೆ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನ ನೀಡಿರುವುದು ಸರಿಯಲ್ಲ. ಕೂಡಲೇ ಆರೋಪಿ ಜಮಾಲ್ ಅಜಾದ್ ಅಣ್ಣಿಗೇರಿ ಬದಲಿಸಬೇಕು ಎಂದು ಶಾಸಕಿ ಆಗ್ರಹಿಸಿದ್ದಾರೆ. ಇಷ್ಟೆಲ್ಲ ವಿರೋಧ ವ್ಯಕ್ತವಾದ ಕಾರಣ ಉತ್ತರ ಕನ್ನಡ ಜಿಲ್ಲಾ ಸಮಿತಿ ರಚನೆ ಆದೇಶಕ್ಕೆ ತಡೆ ನೀಡಿ ರಾಜ್ಯ ವಕ್ಫ್ ಮಂಡಳಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ:ಪರೇಶ್ ಮೇಸ್ತಾ ಹತ್ಯೆ ಆರೋಪಿಗೆ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನ: ಬಿಜೆಪಿ ವಿರುದ್ಧ ಆಕ್ರೋಶ