ಶಿರಸಿ:ಚಿತ್ರಕಲಾ ನೈಪುಣ್ಯತೆಯಿಂದ ಹೆಸರು ಮಾಡಿರುವ ಶಿರಸಿಯ ಯುವ ಕಲಾವಿದ ಕೌಶಿಕ್ ಕೃಷ್ಣ ಹೆಗಡೆಯವರ ಸಂಯೋಜಿತ ಕಲಾಕೃತಿಯೊಂದು ' ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ' ಆಯ್ಕೆಯಾಗಿದೆ. ಈ ಮೂಲಕ ಚಿತ್ರ ಕಲಾವಿದರಲ್ಲಿ ಈ ದಾಖಲೆ ಬರೆದ ಜಿಲ್ಲೆಯ ಮೊದಲ ವ್ಯಕ್ತಿ ಇವರು ಎಂಬ ಹೆಮ್ಮೆಗೆ ಪಾತ್ರರಾಗಿದ್ದಾರೆ.
ಸಿನಿಮಾ ರಂಗದ ಪ್ರಖ್ಯಾತ 100 ಕಲಾವಿದರ ಭಾವಚಿತ್ರಗಳನ್ನು ರಚಿಸಿ ಅವುಗಳನ್ನು ಸಂಯೋಜಿಸಿ (ಕೊಲಾಜಿಂಗ್) ಕನ್ನಡದ ನಟಸಾರ್ವಭೌಮ ರಾಜ್ಕುಮಾರ್ ಭಾವಚಿತ್ರವನ್ನು ಮೂಡಿಸಿರುವ ಕೌಶಿಕ್ ಹೆಗಡೆ ಪ್ರತಿಭೆ ಇದೀಗ ದಾಖಲೆಯ ಪುಟ ಸೇರಿದೆ. 3 ನಿಮಿಷದಲ್ಲಿ ಒಂದು ಭಾವಚಿತ್ರ ಬರೆದು ಅಂಥಹ 100 ಚಿತ್ರಗಳನ್ನು ಸಂಯೋಜಿಸಿ ಡಾ. ರಾಜಕುಮಾರ್ ಭಾವಚಿತ್ರವನ್ನು ತಯಾರಿಸಿದ್ದಾರೆ. 8 ತಾಸುಗಳ ಪರಿಶ್ರಮದ ಇವರ ಚಾಕಚಕ್ಯತೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಸಿಕ್ಕಿದೆ.
ಕಳೆದ ಅಗಸ್ಟ್‌ನಲ್ಲಿ ಇವರು ಚಿತ್ರ ರಚಿಸಿ ಕಳಿಸಿಕೊಟ್ಟಿದ್ದರು. ಅದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಲು ಆಯ್ಕೆಗೊಂಡು ಸೆ. 19 ರಂದು ಈ ಕುರಿತಾದ ಪ್ರಮಾಣಪತ್ರ ಸಿದ್ಧವಾಗಿ ಇದೀಗ ಕೌಶಿಕ್ ಅವರ ಕೈಸೇರಿದೆ. ಈ ಚಿತ್ರ ಸಾಧನೆಯು 2021ರ ಜನವರಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಮುದ್ರಿತವಾಗಲಿದೆ.