ಭಟ್ಕಳ: ರಂಜನ್ ಇಂಡಿಯನ್ ಏಜೆನ್ಸಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಇಂದು ಪಾದಯಾತ್ರೆ ಹಮ್ಮಿಕೊಂಡಿದ್ದು, ಸಹಸ್ರಾರು ಭಕ್ತರು ಭಾಗಿಯಾಗಿದ್ದರು.
ರಂಜನ್ ಇಂಡಿಯನ್ ಏಜೆನ್ಸಿ ವತಿಯಿಂದ ಪಾದಯಾತ್ರೆ ಆಯೋಜನೆ ಕಳೆದ 11 ವರ್ಷದಿಂದ ಈ ಪಾದಯಾತ್ರೆ ನಡೆಸಿಕೊಂಡು ಬರಲಾಗುತ್ತಿದ್ದು, ಇಂದು ನಸುಕಿನ ಜಾವ 3.45 ಕ್ಕೆ ಇಲ್ಲಿನ ಪಟ್ಟಣದ ಚೋಳೇಶ್ವರ ದೇವಸ್ಥಾನದಿಂದ ಆರಂಭವಾದ ಪಾದಯಾತ್ರೆ ಮಾರಿಗುಡಿ ದೇವಸ್ಥಾನ, ಪೇಟೆ ಮುಖ್ಯ ರಸ್ತೆ, ಹಳೆ ಬಸ್ ನಿಲ್ದಾಣ, ಹೆದ್ದಾರಿ ಮಾರ್ಗವಾಗಿ ಬಸ್ತಿಯ ಮೂಲಕ ಮುರ್ಡೇಶ್ವರದ ದೇವಸ್ಥಾನಕ್ಕೆ ತಲುಪಿದರು. ನಂತರ ಸಮುದ್ರದಲ್ಲಿ ಸ್ನಾನ ಮಾಡಿದ ಭಕ್ತರು ಶ್ರದ್ಧಾ ಭಕ್ತಿಯಿಂದ ದೇವರ ದರ್ಶನ ಪಡೆದುಕೊಂಡರು.
ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು ಬರಿ ಕಾಲಿನಲ್ಲಿ ನಡೆದುಕೊಂಡು ಶಿವ ನಾಮ ಸ್ಮರಣೆ, ಶಿವ ಸ್ತುತಿಯೊಂದಿಗೆ ಜಯಘೋಷ ಕೂಗುತ್ತಾ ಮುಂದೆ ಸಾಗಿದರು. ರಂಜನ್ ಇಂಡೇನ್ ಎಜೆನ್ಸಿ ಮಾಲೀಕರಾದ ಶಿವಾನಿ ಶಾಂತಾರಾಮ ಭಟ್ಕಳ, ಶಾಂತಾರಾಮ ಭಟ್ಕಳ ಇವರ ನೇತೃತ್ವದಲ್ಲಿ ಪಾದಯಾತ್ರೆ ಆರಂಭಗೊಂಡಿದ್ದು, ಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಲಘು ಉಪಹಾರ ಮತ್ತು ವಾಹನ ವ್ಯವಸ್ಥೆ ಮಾಡಲಾಗಿತ್ತು. ಸರಿ ಸುಮಾರು 15-18 ಕಿ.ಮೀ. ಭಟ್ಕಳದಿಂದ ಮುರ್ಡೇಶ್ವರದ ತನಕ ಪಾದಯಾತ್ರೆ ಮಾಡಲಾಯಿತು. ಈ ಬಾರಿ ಸರಿ ಸುಮಾರು 2500 ಕ್ಕೂ ಅಧಿಕ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಸಿ.ಪಿ.ಐ ದಿವಾಕರ ನೇತೃತ್ವದ ಪಿ.ಎಸ್.ಐ ಕುಡಗುಂಟಿ, ಮುರ್ಡೇಶ್ವರ ಠಾಣಾ ಪಿ.ಎಸ್.ಐ ರವೀಂದ್ರ ಬಿರಾದಾರ್ ಹಾಗೂ ಸಿಬ್ಬಂದಿ ಪಾದಯಾತ್ರೆಗೆ ಸೂಕ್ತ ಭದ್ರತೆ ಒದಗಿಸಿದರು.
ಈ ವೇಳೆ ಮಾತನಾಡಿದ ಶಿವಾನಿ ಶಾಂತಾರಾಮ ಭಟ್ಕಳ, ಸತತ 11ವರ್ಷದಿಂದ ಪಾದಯಾತ್ರೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ. ದೈವ ನಂಬಿಕೆ ಜೊತೆಗೆ ಹಬ್ಬದ ಸಂಭ್ರಮವನ್ನು ಎಲ್ಲರು ಸೇರಿ ಆಚರಿಸಬೇಕೆಂಬುವುದು ನಮ್ಮದಾಗಿದೆ. ಕಾರ್ಯಕ್ರಮ ಆಯೋಜನೆಗೆ ಸಹಕರಿಸಿದ ಎಲ್ಲ ಭಕ್ತರಿಗೂ, ಪೊಲೀಸ್ ಇಲಾಖೆಗೂ, ಆರೋಗ್ಯ ಇಲಾಖೆಗೂ ಧನ್ಯವಾದ ತಿಳಿಸಿದರು.